ಇನ್ನೊಬ್ಬರ ಬಗ್ಗೆ ಏನು ನಮಗೆ ತಿಳಿದಿದೆಯೋ ಅದನ್ನು ನಂಬಬೇಕೇ ಹೊರತು ಬೇರೆಯವರಿಂದ ಕೇಳಿದ್ದನ್ನಲ್ಲ …
ಇನ್ನೊಬ್ಬರ ಬಗ್ಗೆ ಟೀಕೆ ಏಕೆ ಸರಿಯಲ್ಲ?
ಯಾರೇ ಆಗಲಿ. ಅವರ ಬಗ್ಗೆ ಟೀಕೆ ಮಾಡಲು ನಾವು ಅರ್ಹರಲ್ಲ. ಏಕೆಂದರೆ ನಮಗೆ ಅಂತರಂಗ ದರ್ಶನವಿಲ್ಲ. ನಾವು ಮಾತನಾಡುವುದು ಕೇವಲ ಹೊರ ನೋಟದಿಂದ. ಒಳಗೆ ‘ಯಾರು ಏನು’ ಎಂದು ಅರಿವ ಶಕ್ತಿ ನಮಗಿಲ್ಲ.
ಆದ್ದರಿಂದ ನಾವು ಈ ವಿಚಾರದಲ್ಲಿ ಎಚ್ಚರವಾಗಿರಬೇಕು. ಟೀಕೆ, ನಿಂದನೆ, ದ್ವೇಷಕ್ಕೆ ತಿರುಗಬಹುದು. ದ್ವೇಷ ನಮ್ಮ ಮನಸನ್ನು ಕೆಡಿಸಿಬಿಡುತ್ತದೆ. ನಾವು ದ್ವೇಷಿಸುವ ವಸ್ತು ನಮ್ಮ ತಲೆಯಲ್ಲಿ ಗಾಢವಾಗಿ ನೆಲೆ ಊರಿ, ಅದು ಸಾವಿನ ಕಾಲದಲ್ಲಿ ಕೊನೆಗೆ ತಲೆ ಎತ್ತಿ ಹೆಡೆ ಅರಳಿಸುತ್ತದೆ. ಇದು ನಮ್ಮನ್ನು ಅಧಪಾತಕ್ಕೆ ಕೊಂಡೊಯ್ಯುತ್ತದೆ.
ನಮ್ಮ ಜೀವನದ ಬಗ್ಗೆ ನಮಗೆ ಸರಿಯಾಗಿ ತಿಳಿದಿರುವುದಿಲ್ಲ. ಇನ್ನಾ ಇನ್ನೊಬ್ಬರ ಜೀವನದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪು…
ಸತ್ಯವನ್ನು ಗುರುತಿಸಿ ವ್ಯವಹರಿಸುವುದು ಒಂದು ಕಲೆ.
ಸತ್ಯವನ್ನು ಗುರುತಿಸಿ ವ್ಯವಹರಿಸುವುದು ಒಂದು ಕಲೆ. ಈ ಕಲೆಯನ್ನು ಅರಿತುಕೊಂಡವನು ಮಾತ್ರ ಉತ್ತಮ ನಾಯಕನಾಗಬಲ್ಲ. ಹೆಚ್ಚಿನವರು ತಮ್ಮ ಖಾಸಗಿ ವಿಷಯಗಳಿಗಿಂತ ಮುಖ್ಯವಾಗಿ ಇತರರ ಬದುಕಿನ ಬಗ್ಗೆ ಅರಿತುಕೊಳ್ಳಲು ಹೆಚ್ಚು ಉತ್ಸುಕರಾಗಿರುತ್ತಾರೆ. ಇದು ಮಾನವನ ಒಂದು ದೌರ್ಬಲ್ಯವೂ ಹೌದು. ಬದುಕಿನಲ್ಲಿ ಹೊಗಳಿಕೆ – ತೆಗಳಿಕೆಗಳು ಎರಡು ಇದ್ದದ್ದೇ. ಪ್ರೀತಿಪಾತ್ರರ ಬಗ್ಗೆ ಯಾರಾದರೂ ಹೊಗಳಿಕೆಯ ಮಾತುಗಳನ್ನಾಡಿದರೆ ಸಂತೋಷಪಡುತ್ತೇವೆ. ತೆಗಳಿಕೆಯ ಮಾತುಗಳನ್ನಾಡಿದರೆ ಅವರ ವಿರುದ್ಧವೇ ರೇಗಾಡುತ್ತೇವೆ.
ಎಷ್ಟೋ ಬಾರಿ ಒಬ್ಬರ ಬಗ್ಗೆ ಇನ್ನೊಬ್ಬರು ಹೇಳಿದ್ದನ್ನೇ ಸತ್ಯವೆಂದು ನಂಬಿ ಅವರ ಬಗ್ಗೆ ಒಂದು ರೀತಿಯ ಪೂರ್ವಾಗ್ರಹಗಳನ್ನಿಟ್ಟುಕೊಂಡು ವ್ಯವಹರಿಸುತ್ತೇವೆ. ಇದರಿಂದಾಗಿ ಎಷ್ಟೋ ಒಳ್ಳೆಯ ಸಂಬoಧಗಳು ದೂರವಾಗುತ್ತವೆ. ಕೆಲವೊಮ್ಮೆ ಆ ವ್ಯಕ್ತಿ ಹತ್ತಿರವಾದ ನಂತರ ನಾವು ಪಶ್ಚಾತ್ತಾಪ ಪಡುವ ಸಂದರ್ಭಗಳು ಎದುರಾಗುತ್ತವೆ. ಆದರೆ ತಾನು ಪರಾಮರ್ಶಿಸಿ ನೋಡದೆ, ತನ್ನ ಅನುಭವಕ್ಕೆ ಬಾರದೆ ಇನ್ನೊಬ್ಬರ ಬಗ್ಗೆ ಪೂರ್ವಾಗ್ರಹ ಇಟ್ಟುಕೊಳ್ಳುವವರು ಎಂದಿಗೂ ಉತ್ತಮ ನಾಯಕರಾಗಿ ಗುರುತಿಸಿಕೊಳ್ಳಲಾರರು.
ಒಮ್ಮೆ ಒಬ್ಬರು ಬಂದು, ‘ನಾನೊಂದು ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ. ನಮ್ಮ ಪಕ್ಷದ ನಾಯಕರಿಗೆ ನಾವು ಅನೇಕ ಮಾಹಿತಿಗಳನ್ನು ಕೊಡುತ್ತೇವೆ. ಆದರೆ ಅದನ್ನು ಕೆಲವು ಬಾರಿ ನಗಣ್ಯವಾಗಿ ಪರಿಗಣಿಸುತ್ತಾರೆ. ಯಾವುದೇ ವಿಷಯ ಹೇಳಿದರೂ ಕೂಡಾ ಅದಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ. ಅನೇಕ ಬಾರಿ ನಮಗೆ ಯಾರ ಮೇಲಾದರೂ ದೂರು ಹೇಳಿ, ಚಾಡಿ ಹೇಳಿ ವ್ಯಕ್ತಿಯ ಮೇಲಿನ ನಾಯಕರ ಮನಸ್ಸನ್ನು ಕೆಡಿಸಬೇಕೆಂದಿರುತ್ತದೆ. ಅವರು ಅದಕ್ಕೆ ಗಮನ ಕೊಡುವುದಿಲ್ಲವೆಂದು ಅಲವತ್ತುಕೊಂಡರು.’ ಇದು ನಿಜವಾದ ನಾಯಕನಲ್ಲಿ ಇರಬೇಕಾದ ಲಕ್ಷಣ.
ಒಬ್ಬ ವ್ಯಕ್ತಿ ತಪ್ಪು ದಾರಿಯನ್ನು ಹಿಡಿದ ಅಥವಾ ಅವನಿಂದ ತಪ್ಪಾಗಿದೆ ಅಂದರೆ ಅದಕ್ಕೆ ಹಲವಾರು ಕಾರಣಗಳಿರುತ್ತವೆ. ಸುಭಾಷಿತವೊಂದು ಹೇಳುವಂತೆ,
ಅಜ್ಞಾನ ಪ್ರಮಾದ, ಅಹಂ
ಕೇಚಿತ್ ಅಜ್ಞಾನತೋ ನಷ್ಟಾಃ ಕೇಚಿತ್ ನಷ್ಟಾಃ ಪ್ರಮಾದತಃ
ಕೇಚಿತ್ ಜ್ಞಾನವಲೇಪೇನ ಕೇಚಿತ್ ನಷ್ಟೈಸ್ತು ನಾಶಿತಾಃ
ಅಂದರೆ ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು.
ಇನ್ನು ಕೆಲವರು ತಮ್ಮ ಕಾರ್ಯಗಳನ್ನು ಮಾಡಿ ಹಾಳಾಗುವರು. ಮತ್ತೆ ಕೆಲವರು ತಾವು ಮಹಾ ಬುದ್ಧಿವಂತರೆoಬ ಅಹಂಕಾರದಿoದ ಹಾಳಾಗುವರು. ಅನೇಕರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು.
ಅಜ್ಞಾನಿಗಳಿಗೆ ತಾವು ಅಜ್ಞಾನಿಗಳೆಂದು ತಿಳಿದಿರುವುದಿಲ್ಲ. ಬೇರೆಯವರು ತಿಳಿಸಿ ಹೇಳಿದರೂ ತಿಳಿಯುವುದಿಲ್ಲ. ಆದ್ದರಿಂದ ಅವರು ತಪ್ಪು ದಾರಿಯನ್ನು ಹಿಡಿಯುವರು.
ಕೆಲವು ಸಂದರ್ಭಗಳಲ್ಲಿ ಅವರಿಗೆ ತಪ್ಪು ದಾರಿ ಹಿಡಿಯಲು ಪುಸಲಾಯಿಸುವವರು ಇರುವರು. ಇನ್ನು ಕೆಲವರು ಅಷ್ಟೇನೂ ಅಜ್ಞಾನಿಗಳು ಅಲ್ಲದಿದ್ದರೂ ಕೆಲವು ಪ್ರಲೋಭನೆಗಳಿಂದಾಗಿ ತಪ್ಪು ದಾರಿ ಹಿಡಿಯುತ್ತಾರೆ. ತಮ್ಮ ದುಷ್ಟ ಸ್ವಭಾವದಿಂದಾಗಿ ತಪ್ಪು ಕೆಲಸಗಳನ್ನು ಮಾಡುವವರೂ ಇರುವರು. ವಂಚಕರ ದಾಕ್ಷಿಣ್ಯಕ್ಕೆ ಒಳಗಾಗಿ ತಪ್ಪು ಮಾಡುವವರೂ ಇರುತ್ತಾರೆ. ಎಂತಹ ಪ್ರಲೋಭನೆಯಿದ್ದರೂ ತಪ್ಪು ಮಾಡದಂಥ ಗಟ್ಟಿ ಮನಸ್ಸಿನವರು ತುಂಬಾ ಕಡಿಮೆ. ಹೀಗೆ ತಪ್ಪು ದಾರಿ ತುಳಿಯುವವರ ಸಂಖ್ಯೆ ಬಹಳಷ್ಟಿದೆ.
ಇದು ರಾಜಕಾರಣಿಗಳಿಗೆ, ಅಧಿಕಾರದಲ್ಲಿರುವವರಿಗೆ ಮಾತ್ರ ಸಂಬoಧಪಟ್ಟ ವಿಷಯವಲ್ಲ. ಸಾಮಾನ್ಯವಾಗಿ ಪ್ರತಿ ಮನೆಯ ಯಜಮಾನ ಅಥವಾ ಯಜಮಾನಿಗೆ ಅನೇಕ ಮಾಹಿತಿಗಳು ಬರುತ್ತಾ ಇರುತ್ತದೆ. ಹಾಗೆಯೇ ಸಂಸ್ಥೆಯೊoದರ ಮುಖ್ಯಸ್ಥರಿಗೂ ಸಾಕಷ್ಟು ಮಾಹಿತಿಗಳು ಬರುತ್ತಿರುತ್ತವೆ.
ಆದರೆ ನಮಗೆ ಮಾಹಿತಿ ನೀಡಿದ ವ್ಯಕ್ತಿ ನಮ್ಮಲ್ಲಿ ಆತ್ಮೀಯನಾಗಿದ್ದಾನೆಂಬ ಕಾರಣಕ್ಕೆ ಒಮ್ಮೆಲೇ ಅವನು ಹೇಳಿದ್ದೆ÷ಸರಿ ಎಂದು ನಂಬಿ ಬಿಡುವುದು ಉತ್ತಮ ನಾಯಕನ ಲಕ್ಷಣವಲ್ಲ. ಇನ್ನೊಬ್ಬರ ಬಗ್ಗೆ ಒಬ್ಬರು ದೂರು ಹೇಳುತ್ತಿದ್ದಾರೆ ಎಂದರೆ ಅದರ ಹಿಂದಿರುವ ಸತ್ಯವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ. ನಮ್ಮಲ್ಲಿ ಆತ್ಮೀಯರಾಗಬೇಕೆಂಬ ಉದ್ದೇಶದಿಂದ ಅಥವಾ ಇತರರ ಎದುರು ತಾನು ಉತ್ತಮನೆಂದು ಗುರುತಿಸಿಕೊಳ್ಳಲು, ತನ್ನಿಂದ ತೀರಿಸಲಾಗದ ಹಗೆಯನ್ನು ಇತರರ ಮೂಲಕವೂ ಸಾಧಿಸಲು ಅವರು ಪ್ರಯತ್ನಿಸುತ್ತಿರಬಹುದು.
ಆದ್ದರಿಂದ ಯಾರಾದರೂ ಮೊದಲಾಗಿ ದೂರು ನೀಡಿದರೆಂದು ಅದನ್ನು ಪರಾಮರ್ಶಿಸದೆ, ಸತ್ಯವನ್ನು ಅರಿತುಕೊಳ್ಳುವ ಪ್ರಯತ್ನವನ್ನೂ ಮಾಡದೆ ತಕ್ಷಣ ತೀರ್ಪು ನೀಡುವುದು, ಪೂರ್ವಾಗ್ರಹ ಬೆಳೆಸಿಕೊಳ್ಳುವುದು, ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ. ಎಷ್ಟೋ ಬಾರಿ ಅವನು ಒಳ್ಳೆಯವನು ಆಗಿರುತ್ತಾನೆ. ಕೈಯಲ್ಲಿರುವ ಐದು ಬೆರಳುಗಳು ಹೇಗೆ ಒಂದೇ ರೀತಿ ಇರುವುದಿಲ್ಲವೋ ಹಾಗೆಯೇ ಒಬ್ಬೊಬ್ಬರ ಗುಣ ಒಂದೊoದು ರೀತಿ ಇರುತ್ತದೆ. ಅದನ್ನರಿತುಕೊಂಡು ವ್ಯವಹರಿಸುವವನೇ ನಿಜವಾದ ನಾಯಕ.
ಆದ್ದರಿಂದ ಕಚೇರಿ, ಸಂಸಾರ, ರಾಜಕೀಯ, ವೃತ್ತಿ ಹೀಗೆ ಯಾವ ರಂಗದಲ್ಲಾಗಲಿ ಯಾವುದೇ ಮಾಹಿತಿಗಳು ನಮಗೆ ತಲುಪಿದಾಗ ತಕ್ಷಣ ಅದಕ್ಕೆ ಪ್ರತಿಕ್ರಿಯೆಯನ್ನು ನೀಡಬಾರದು. ಇಂದು ಮೊಬೈಲ್ ಯುಗ. ಅನೇಕ ಮಾಹಿತಿಗಳು ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಿಂದ ಬರುತ್ತದೆ. ಕೆಲವೊಮ್ಮೆ ಕೆಲವರು ಅವೆಲ್ಲವನ್ನು ನಂಬಿ ಬಿಡುತ್ತಾರೆ. ಯಾವುದೇ ವ್ಯಕ್ತಿಯ ಬಗ್ಗೆ ಅವಹೇಳನಕಾರಿ ಮಾತುಗಳು ಬರಬಹುದು ಅಥವಾ ವಿಚಾರಗಳು ಬರಬಹುದು.
ಅವುಗಳನ್ನು ವಿಮರ್ಶಿಸದೆ ಯಾವುದೇ ನಿರ್ಧಾರಕ್ಕೆ ಬರುವುದು ಒಳ್ಳೆಯ ಲಕ್ಷಣವಲ್ಲ. ಎಲ್ಲವನ್ನು ಕೂಡಾ ಹಸುವಿನ ಹಾಗೆ ಗಬಗಬನೆ ತಿನ್ನಬೇಕು. ಹಸುವಿನಂತೆ ಅದನ್ನು ಹೊಟ್ಟೆಯಿಂದ ಬಾಯಿಗೆ ತಂದು ಅನೇಕ ಬಾರಿ ಜಗಿದು, ಜೀರ್ಣಿಸಿಕೊಂಡಾಗ ಪೌಷ್ಠಿಕಾಂಶಗಳು ದೇಹದ ಎಲ್ಲ ಭಾಗಗಳಿಗೂ ದೊರೆಯುತ್ತದೆ ಎಂಬುದು ನಾವು ಕಂಡುಕೊoಡ ಸತ್ಯ. ಇದೇ ರೀತಿ ಯಾವುದೇ ವಿಚಾರವನ್ನು ತಿಳಿದುಕೊಂಡು ಅದನ್ನು ಅನೇಕ ಬಾರಿ, ಹಲವು ರೀತಿಯಲ್ಲಿ ವಿಮರ್ಶಿಸಬೇಕು. ಆಗ ಅದರ ಸತ್ಯಾಸತ್ಯತೆಯನ್ನು ತಿಳಿಯಲು ಸಾಧ್ಯ.
“ನಮಗೊಪ್ಪಿಗೆಯಾದ ಕಾರಣಕ್ಕೆ ಇನ್ಯಾರನ್ನೋ ಹೊಗಳಲು ಶುರು ಮಾಡುತ್ತೇವೆ. ಯಾವುದು ಸತ್ಯ, ಯಾವುದು ಸರಿಯೆಂದು ತಿಳಿಯುವ ಗೋಜಿಗೆ ಹೋಗದೆ ಇಂಥದ್ದನ್ನೆಲ್ಲಾ ಶ್ರದ್ಧೆಯಿಂದ ಮಾಡುತ್ತೇವೆ. ನಮಗಿರುವ ಬುದ್ಧಿವಂತಿಕೆಯಿoದಲೇ ಒಮ್ಮೆ ಕುಳಿತು ವಿಚಾರ ಮಾಡಿದರೆ, ಬಹಳಷ್ಟು ನಮಗೇ ಅರಿವಾಗುತ್ತದೆ.
ಸತ್ಯದ ಹುಡುಕಾಟವು ಒಂದು ಕಲೆ. ಇದನ್ನರಿತು ಬದುಕಿದ್ದಲ್ಲಿ ಜೀವನದಲ್ಲಿ ಯಶಸ್ಸು, ನೆಮ್ಮದಿ ಸುಲಭವಾಗಿ ಲಭಿಸುತ್ತದೆ. ಸಮಸ್ಯೆಗಳು ಸರಳವಾಗಿ ಬಗೆಹರಿಯುತ್ತವೆ.