ಜೀವನದ ಹಿತನುಡಿಗಳು – ಜೀವನವೇ ಹೀಗೆ..!

ಜೀವನದ ಹಿತನುಡಿಗಳು – ಜೀವನವೇ ಹೀಗೆ..! ಬದುಕೋಕೆ ಗೊತ್ತಿರೋರಿಗೆ ಜೀವನ ಸರಿ ಇರಲ್ಲ..! ಜೀವನ ಸರಿ ಇರೋರಿಗೆ ಬದುಕೋದೆ ಗೋತಿರಲ್ಲ..!

ಪುಸ್ತಕವೆನ್ನುವುದು ಬಾವಿಯ ನೀರು

ಸ್ನೇಹಿತರೇ, ಸಮುದ್ರದಲ್ಲಿ ಎಷ್ಟು ನೀರಿದ್ದರೇನು ಬಾಯಾರಿದಾಗ ಕುಡಿಯಲು ಯೋಗ್ಯವಲ್ಲ. ನೀರು ಬಾವಿಯದು, ಸುರಂಗದ ನೀರು,ಇತ್ತೀಚೆಗೆ ಬೋರ್ವೆಲ್ ನೀರು ಬೇಕೇ ಬೇಕು.ಹಳ್ಳ ,ಹೊಳೆ,ಕೆರೆ ನೀರನ್ನೂ ಕುಡಿಯುವವರೂ ಇದ್ದಾರೆ, ಅನಿವಾರ್ಯವಾಗಿ.

ಕಡು ಕತ್ತಲೆಯಲ್ಲಿ ಆಕಾಶದಲ್ಲಿ ತಾರೆಗಳು ಸಹಸ್ರ ಗೋಚರಿಸಬಹುದು. ದಾರಿಹೋಕನಿಗೆ ಆ ಬೆಳಕು ಸಾಕಾಗದು. ಕಷ್ಟಕಾಲದಲ್ಲಿ ದೂರ ಇದ್ದವನಿಂದ ಯಾವ ಉಪಕಾರವೂ ತಕ್ಷಣ ಸಿಗದು, ಅದಕ್ಕೆ ಪಕ್ಕದ ಮನೆಯವನೇ ಆಗಬೇಕು. ಡಿ.ವಿ.ಜಿಯವರು ಹೇಳಿದ ಒಂದು ಮಾತು ನೆನಪಾಗುತ್ತಿದೆ.

ದೂರದಾ ದೈವವಂತಿರಲಿ ಮಾನುಷ ಸಖನ

ಕೋರುವುದು ಬಡಜೀವ–ಮಂಕುತಿಮ್ಮ

ದೂರದ ಬಂಧುಗಳು ನಂತರ ಒದಗಿ ಬರುವವರು.

ಇದೇ ರೀತಿ ನಮಗೆ ಮಾರ್ಗದರ್ಶನ ಮಾಡಲು ಒಳ್ಳೊಳ್ಳೆಯ ಪುಸ್ತಕಗಳಿವೆ. ಆ ಪುಸ್ತಕಗಳನ್ನು ಬಿಡುವಿರುವಾಗ ಓದಿ, ಮಸ್ತಕಕ್ಕೆ ತೆಗೆದುಕೊಂಡು, ಬೇಕಾಗುವಾಗ ಉಪಯೋಗ ಮಾಡಿಕೊಳ್ಳೋಣ. ‘ಒಂದು ಉತ್ತಮ ಗ್ರಂಥ ಅಥವಾ ಪುಸ್ತಕ ನಮ್ಮ ಪಾಲಿನ ಓರ್ವ ಆತ್ಮೀಯ ಗೆಳೆಯನಿದ್ದಂತೆ., ಮನೆಬೆಳಕು, ಮನೆ ಮನುಷ್ಯರು ಇದ್ದ ಹಾಗೆ. ಸಕಾಲದಲ್ಲಿ ಒದಗುವವರು.

ಪುಸ್ತಕಗಳೆಂದರೆ ಬಾವಿಯ ಪರಿಶುದ್ಧ ನೀರಿನಂತೆ. ಬೇಕಾದಾಗ ಬೇಕಾದಷ್ಟು ಉಪಯೋಗಿಸಿಕೊಳ್ಳಬಹುದು.

ಕಡಲು ಅಗಾಧ, ಅಪಾರ, ತನ್ನ ನೀರನ್ನು ಆವಿಯಾಗಿಸಿ ಪುನಃ ಮಳೆಯ ಮೂಲಕ ನೀರು ಒದಗಿಸುತ್ತದೆ. ನಮ್ಮ ಮನೆಯ ಬಾವಿಗೆ ನೀರು ಬರುವುದು ಸಮುದ್ರದ ನೀರಿನಿಂದ. ಉತ್ತಮ ಪುಸ್ತಕಗಳೂ ಹಾಗೆ. ಜೀವನ ಸಾಗರದ ಅನುಭವ ಸಂಪತ್ತಿನ ಸಾರಸಂಗ್ರಹವೇ ಪುಸ್ತಕಗಳಲ್ಲಿ ಸಾಕ್ಷರವಾಗಿದೆ. ಪುಸ್ತಕಗಳಂತಹ ಮಿತ್ರರು ಬೇರೊಬ್ಬರಿರಲು ಸಾಧ್ಯವಿಲ್ಲ. ಎಲ್ಲಿ ಹೋಗುವಾಗಲೂ ಪುಸ್ತಕಗಳನ್ನು ಜೊತೆಗೆ ಒಯ್ಯಬಹುದು. ಪುಸ್ತಕಗಳು ನಮ್ಮ ಪಾಲಿನ ದೈವವೇ ಸರಿ. ಜೀವನವೆನ್ನುವುದು ಕಡಲು

ಅನುಭವವೆನ್ನುವುದು ನದಿಯ ನೀರು.!

ಪುಸ್ತಕವೆನ್ನುವುದು ಬಾವಿಯ ನೀರು.!!

ಸಾರ್ಥಕತೆಯನ್ನು ಹೊಂದೋಣ

ಛಾಯಾಮನ್ಯಸ್ಯ ಕುರ್ವಂತಿ ತಿಷ್ಮಂತಿ ಸ್ವಯಮಾತಪೇ/

ಫಲಾನ್ಯಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾ ಇವ//

ಹಸಿರು ಸಸ್ಯಗಳು ಯಾವಾಗಲೂ ಬೇರೆಯವರಿಗೆ ನೆರಳನ್ನು ನೀಡಿ, ತಾವು ಮಾತ್ರ ಬಿಸಿಲಿನಲ್ಲಿಯೇ ನಿಲ್ಲುತ್ತವೆ. ತಮ್ಮ ಹೂ ಹಣ್ಣುಗಳನ್ನು ಇತರರಿಗಾಗಿಯೇ ಮೀಸಲಿಡುತ್ತವೆ. ತಮ್ಮನ್ನೇ ಬೇರೆಯವರಿಗೆ ಸಮರ್ಪಿಸಿಕೊಳ್ಳುತ್ತವೆ. ಇಲ್ಲಿ ನಮಗೆ ಕಂಡುಬರುವುದು, ಪರರ ಕಲ್ಯಾಣಕ್ಕಾಗಿಯೇ ಗಿಡಮರಗಳ ಸೃಷ್ಟಿ. ಜೀವದ ಉಸಿರನ್ನೂ ಸಹ ನೀಡುವಂತಹ ಗಿಡಗಳನ್ನು, ಸ್ವಲ್ಪವೂ ದಾಕ್ಷಿಣ್ಯ ಮಾಡದೆ ಕಡಿದು ಎಸೆಯುತ್ತೇವೆ.

ಹೆರವರಿಗಾಗಿ ಮರುಗುವವರು ತುಂಬಾ ಕಡಿಮೆ, ಬೆರಳೆಣಿಕೆಯಷ್ಟು ಎಂದರೂ ತಪ್ಪಾಗಲಾರದು.ಅವನು ಏನು ಬೇಕಾದರೂ ಮಾಡಲಿ, ನಾನು ಬದುಕಿದರೆ ಸಾಕು ಎಂಬ ಭಾವನೆ ಎಂದು ಹೋಗುವುದೋ, ಅಂದು ನಾವೆಲ್ಲರೂ ಮನುಷ್ಯರಾಗಲು ಸಾಧ್ಯ.

ನಮ್ಮ ತಲೆಕೂದಲುಗಳಿಗೆ, ಶರೀರಕ್ಕೆ, ಮುಪ್ಪು ಬರುವುದು ಸಹಜ, ಆದರೆ ಬದುಕುವ ಆಸೆ ಪ್ರತಿಯೊಬ್ಬನ ಹತ್ತಿರವೂ ಉತ್ಕಟವಾಗಿರುತ್ತದೆ. ಸಂಪತ್ತಿನ ವ್ಯಾಮೋಹಕ್ಕೆ ಕಟ್ಟು ಬಿದ್ದು ನಮ್ಮತನವನ್ನು ಕಳಕೊಳ್ಳುತ್ತಾ ಇದ್ದೇವೆ.

ಪರೋಪಕಾರದಲ್ಲಿ ಸ್ವರ್ಗವನ್ನು ಕಾಣುವ, ಹಸಿದವಗೆ ಒಂದು ತುತ್ತು ಅನ್ನ ನೀಡುವ, ನೊಂದವನ ಬಾಳಿನ ಆಶಾಕಿರಣಗಳು ನಾವಾಗೋಣ, ಕೂಡಿಟ್ಟ ಸಂಪತ್ತು, ಕಷ್ಟ ಕಾಲಕ್ಕೆ ಆಗಿ ಬರದ ಮೇಲೆ ಯಾತಕ್ಕೆ?

ಈ ಜಗತ್ತಿನಲ್ಲಿ ಬೆಳಕನ್ನು ಕಂಡ ನಾವುಗಳು ತುಂಬಿದ ಸಾಗರದ ನೀರಹನಿಗಳ ಬಿಂದುಗಳಾಗೋಣ, ಸಾರ್ಥಕತೆಯನ್ನು ಹೊಂದೋಣ.