Top 5 Kannada Stories – ಹಣೆಬರಹ ಬದಲಾಯಿಸಲು ಬರೆದ ಆ ಬ್ರಹ್ಮನಿಂದಲೇ ಸಾಧ್ಯವಿಲ್ಲ

If you are looking for a Kannada Stories then you are in the right place. Here is the list of small Kannada Stories for you.

Best 5 Small Kannada Stories

#1. Kannada Story – “ಹಣೆಬರಹ”

ಒಂದಾನೊಂದು ಕಾಲದಲ್ಲಿ ಸುವರ್ಣಗಿರಿ ಎಂಬ ರಾಜ್ಯದಲ್ಲಿ ‘ ಚಂದ್ರಸೇನನೆಂಬ ರಾಜನು ಆಳುತ್ತಿದ್ದನು . ಆತನು ದಾನ , ಧರ್ಮ , ಪೂಜೆ ಪುನಸ್ಕಾರಗಳಿಗೆ ಪ್ರಖ್ಯಾತನಾಗಿದ್ದನು .

ನನ್ನ ರಾಜ್ಯದಲ್ಲಿ ಬಡವರೇ ಇರಬಾರದು . ಎಲ್ಲರೂ ಸುಖ ಸೌಭಾಗ್ಯಗಳಿಂದ ಕೂಡಿರಬೇಕು ‘ ಎಂಬ ಭಾವನೆ ಹೊಂದಿ ತನ್ನ ಪ್ರಜೆಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಕಾಣುತ್ತಿದ್ದನು . ಆಗಾಗ ಸಂಜೆಯ ವೇಳೆ ಮಂತ್ರಿ ಸುಗುಣಾನಂದನೊಡನೆ ವಾಯು ವಿಹಾರಕ್ಕೆ ಹೋಗುತ್ತಿದ್ದನು .

ಒಂದು ದಿನ ಹೀಗೆ ಹೋಗುತ್ತಿರುವಾಗ ಸಂಜೆ ಮುಗಿದು ಕತ್ತಲಾಗುತ್ತ ಬಂತು . “ ಮಂತ್ರಿಗಳೇ ಬೇಗ ರಾಜಧಾನಿ ಸೇರೋಣ . ಕುದುರೆಯನ್ನು ವೇಗವಾಗಿ ಓಡಿಸಿ ‘ ಎಂದು ಸೂಚಿಸಿದನು .

ಕೊಂಚ ದೂರ ಹೋಗುವುದರಲ್ಲಿ ರಾಜನು ಕುದುರೆಯನ್ನು ನಿಲ್ಲಿಸಿ ‘ ಮಂತ್ರಿಗಳೇ ಕತ್ತಲಾಗುತ್ತಾ ಬಂದಿದ್ದರೂ ಕುಟೀರದ ಮುಂದೆ ತೋಟದ ಕೆಲಸ ಮಾಡುತ್ತಿರುವ ವಿಪ್ರ ಯಾರು ? ತುಂಡುಬಟ್ಟೆ ಉಟ್ಟು ಚಳಿಯನ್ನು ಲೆಕ್ಕಿಸದ ಆ ಮಹಾ ಪುರುಷ ಯಾರು ‘ ಎಂದು ಕೇಳಿದರು .

ಆಗ ಮಂತ್ರಿಯು ಆತ ಶೇಷ ಶರ್ಮನೆಂಬ ಪ್ರಖಾಂಡ ಪಂಡಿತ , ಶ್ರಮಜೀವಿ ಎಂದರು . “ ನಮ್ಮ ರಾಜ್ಯದಲ್ಲಿ ಆತ ಏಕೆ ಇಷ್ಟು ಕಷ್ಟಪಡಬೇಕು  ಅರಮನೆಗೆ ಕರೆಸಿ ಬೇಕಾದ್ದನ್ನು ಕೊಡಿ ‘ ಎಂದನು . `

ಕ್ಷಮಿಸಿ ಮಹಾರಾಜ ಆತ ಮಹಾ ಆತ್ಮ ಗೌರವಿ , ಯಾರಿಂದ ಏನೂ ಬೇಡುವುದಿಲ್ಲ . ಯಾರ ಸಹಾಯವನ್ನೂ ಬಯಸುವುದಿಲ್ಲ . ಕಾಯಕ ಮಾಡಿ ಹೆಂಡತಿ ಮಕ್ಕಳನ್ನು ಪೋಷಿಸುತ್ತಿದ್ದಾನೆ ‘ ಎಂದು ಉತ್ತರಿಸಿದನು ಮಂತ್ರಿ .

ಸರಿ ನಡೆಯಿರಿ ಇದಕ್ಕೆ ನಾವೇ ಒಂದು ಉಪಾಯ ಮಾಡೋಣ ‘ ಎಂದು ಇಬ್ಬರೂ ಹೊರಟರು . ಮಾರನೆಯ ದಿನ ಶೇಷ ಶರ್ಮನ ತೋಟದಲ್ಲಿ ಒಂದು ಚೀಲ ಸಿಕ್ಕಿತು . ಅದರ ತುಂಬಾ ಚಿನ್ನದ ನಾಣ್ಯಗಳಿದ್ದವು .

ಕೂಡಲೆ ಆತ ಅದನ್ನು ಕೈಯಲ್ಲಿ ಹಿಡಿದು ರಾಜ ದರ್ಬಾರಿಗೆ ನಡೆದ ‘ ಮಹಾ ಪ್ರಭು ನನ್ನ ತೋಟದಲ್ಲಿ ಚಿನ್ನದ ನಾಣ್ಯಗಳಿರುವ ಈ ಚೀಲ ಸಿಕ್ಕಿದೆ , ಯಾರದೋ ಏನೋ ವಿಚಾರಣೆ ನಡೆಸಿ ಅವರಿಗೆ ತಲುಪಿಸಿ  ಎಂದು ಹೇಳಿ ಹೊರಡಲನುವಾದ

ಆಗ ರಾಜನು ‘ ಅದು ಯಾರದೇ ಆಗಲಿ , ನಿಮ್ಮ ತೋಟದಲ್ಲಿ ಸಿಕ್ಕಿದೆ . ನೀವೇ ಅನುಭವಿಸಿ ‘ ಎಂದನು . ಆಗ ಶೇಷ ಶರ್ಮ ‘ ಕ್ಷಮಿಸಿ ಮಹಾ ಪ್ರಭು , ನಿತ್ಯ ನನ್ನ ತೋಟಕ್ಕೆ ಅನೇಕ ಹಕ್ಕಿಗಳು ಬರುತ್ತವೆ .

ನವಿಲು , ಜಿಂಕೆಗಳು ಬರುತ್ತವೆ . ಅವು ನಮ್ಮದೆಂದರೆ ದ್ರೋಹವಾಗುವುದಿಲ್ಲವೆ ? ಅನೇಕ ಮಂದಿ ದಾರಿಹೋಕರು ನಮ್ಮ ತೋಟದ ಹಣ್ಣು ಹಂಪಲು ತಿಂದು ಹೋಗುತ್ತಾರೆ .

ಅವರು ನಮ್ಮವರಾಗುತ್ತಾರೆ ? ಕ್ಷಮಿಸಿ ಆ ಹಣ ಯಾರದೋ ಅವರಿಗೆ ಕೊಡಿ ‘ ಎಂದನು . ‘ ನಮ್ಮ ಹಣೆಯಲ್ಲಿ ಬರೆದಿರುವಷ್ಟು ನಮಗೆ ಸಿಕ್ಕಿದೆ . ನಾನು ಅದರಿಂದ ಸುಖವಾಗಿದ್ದೇನೆ ‘

ಎಂದು ವಂದಿಸಿ ಕುಟೀರಕ್ಕೆ ತೆರಳಿದನು . ಮಂತ್ರಿ ` ಪ್ರಭು ಹಣೆಬರಹ ಬದಲಾಯಿಸಲು ಬರೆದ ಆ ಬ್ರಹ್ಮನಿಂದಲೇ ಸಾಧ್ಯವಿಲ್ಲ ಎಂದನು .

#2. Kannada Story – “ತಪ್ಪು ಉತ್ತರ”

ಕಾಡಿನ ಒಂದು ಮರದ ಮೇಲೆ ಒಂದು ಕೋಗಿಲೆ ವಾಸವಾಗಿತ್ತು . ಅದೇ ಮರದ ‘ ಮೇಲೆ ಬೇರೆ ಕೆಲವು ಪಕ್ಷಿಗಳು ವಾಸವಾಗಿದ್ದವು , ಕೋಗಿಲೆಗೆ ಖುಷಿಯಾದಾಗ ಅದು ಹಾಡುತ್ತಿತ್ತು ,

ಇದರಿಂದ ಬೇರೆ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿತ್ತು . ಒಂದು ದಿನ ಎಲ್ಲ ಪಕ್ಷಿಗಳು ಸೇರಿ ಅದನ್ನು ಅಲ್ಲಿಂದ ಓಡಿಸಿದವು . ಅದು ಕಾಡಿನ ಹೊರಗೆ ಇರುವ ಒಂದು ಒಣಮರದ ಮೇಲೆ ಹೋಗಿ ಕುಳಿತುಕೊಂಡಿತು .

ಅಷ್ಟರಲ್ಲೇ ಮತ್ತೊಂದು ಕೋಗಿಲೆ ಅಲ್ಲಿಗೆ ಬಂತು. ತನ್ನ ಬಂಧುವೊಂದು ನಿರಾಶೆಯಿಂದ ಕುಳಿತಿರುವುದನ್ನು ಕಂಡು ಅದರ ನಿರಾಶೆಗೆ ಕಾರಣ ಏನೆಂದು ಕೇಳಿತು.

ಅದಕ್ಕೆ ಮೊದಲನೆಯ ಕೋಗಿಲೆ ‘ ನಾನು ಕಾಡಿನಲ್ಲಿರುವ ಒಂದು ಮರದ ಮೇಲೆ ವಾಸಿಸುತ್ತಿದ್ದೆ . ನನಗೆ ಖುಷಿಯಾದಾಗ ಹಾಡುತ್ತಿದ್ದೆ . ಒಂದು ದಿನ ಆ ಮರದ ಮೇಲೆ ವಾಸವಾಗಿದ್ದ ಬೇರೆ ಪಕ್ಷಿಗಳು ‘ ನೀನೇಕೆ ಹಾಡುವಿ ? ” ಎಂದು ಕೇಳಿದವು . ಅದಕ್ಕೆ ನಾನು ನನ್ನ ಸಂತೋಷಕ್ಕಾಗಿ ಹಾಡುತ್ತೇನೆ .

ಹಾಡದೇ ನಾನು ಬದುಕಿರಲಾರೆ ಎಂದು ಹೇಳಿದೆ . ಆಗ ಎಲ್ಲ ಪಕ್ಷಿಗಳು ಸೇರಿ ನನ್ನನ್ನು ಅಲ್ಲಿಂದ ಓಡಿಸಿಬಿಟ್ಟವು ‘ ಎಂದು ಹೇಳಿತ್ತು . ಆಗ ಎರಡನೆಯ ಕೋಗಿಲೆ ‘ ನೀನು ಅವಕ್ಕೆ ತಪ್ಪು ಉತ್ತರ ಕೊಟ್ಟಿರುವೆ .

ಅದಕ್ಕೆ ಹಾಗಾಗಿದೆ ನಿನ್ನ ಉತ್ತರದಿಂದ ಅವು ನೀನೊಬ್ಬ ಸ್ವಾರ್ಥ. ನಿನ್ನ ಮೇಲೆ ನಿನಗೆ ನಿಯತ್ರಣವಿಲ್ಲ ಎಂದು ತಿಳಿದುಬಿಟ್ಟಿವೆ .

ನನಗೂ ಆ ಪಕ್ಷಿಗಳು ಅದೇ ಪ್ರಶ್ನೆಯನ್ನು ಕೇಳಿದ್ದವು . ಅದಕ್ಕೆ ನಾನು ‘ ನಾನು ನಿಮ್ಮನ್ನು ಖುಷಿಪಡಿಸುವದಕ್ಕಾಗಿ ಹಾಡುತ್ತೇನೆ ‘ ಎಂದು ಹೇಳಿದ್ದೆ .

ಆದ್ದರಿಂದ ನಾನು ಈಗಲೂ ಅವುಗಳ ಜೊತೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದು ಹೇಳಿತು . ನಾವು ಆಡುವ ಮಾತು ತುಂಬ ಜಾಣ್ನೆಯಿಂದ ಕೊಡಿರಬೇಕು .

ಆದ್ದರಿಂದಲೇ ‘ ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ ‘ ಎಂದು ಹಿರಿಯರು ಹೇಳಿರುವುದು.

#3. Kannada Story – “ಮುಖಭಂಗ

ಒಂದು ಹಳ್ಳಿ. ಅಲ್ಲಿ ಹೆಚ್ಚು – ಕಡಿಮೆ ಎಲ್ಲ ಬಡ ಕುಟುಂಬಗಳೇ ಇದ್ದವು.

ಒಂದು ಮಾತ್ರ ಶ್ರೀಮಂತ ಕುಟುಂಬವಿತ್ತು . ಈ ಕುಟುಂಬದ ಯಜಮಾನ ಬಡ ಕುಟುಂಬಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಗರ್ವದಿಂದ ಮೆರೆಯುತ್ತಿದ್ದನು . ಇವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಎಲ್ಲರೂ ಕಾಯುತ್ತಿದ್ದರು . ಆ ಹಳ್ಳಿಯಲ್ಲಿ ಪ್ರತಿ ವರ್ಷದಂತೆ ಗ್ರಾಮ ದೇವತೆಯ ಹಬ್ಬ ಬಂತು .

ಸುತ್ತಮುತ್ತಲಿನ ಗ್ರಾಮದವರು ಸೇರಿದ್ದರು. ಗ್ರಾಮ ದೇವತೆಯ ಹಬ್ಬದ ವಿಶೇಷ ದೇವತೆಯ ಮೈ ಮೇಲೆ ಹಾಕಿರುವ ಸೀರೆಯನ್ನು ಹರಾಜು ಹಾಕುವುದಾಗಿತ್ತು . ಅದನ್ನು ತೆಗೆದುಕೊಂಡವರಿಗೆ ಪುಣ್ಯ ಲಭಿಸುವುದು ಎಂಬ ನಂಬಿಕೆಯಿತ್ತು . ಯಾವಾಗಲೂ ಸೀರೆ ಶ್ರೀಮಂತ ಕುಟುಂಬದ ಪಾಲಾಗುತ್ತಿತ್ತು .

ಈ ಸಾರಿ ಹಬ್ಬದಲ್ಲಿ ಹರಾಜು ಪ್ರಾರಂಭವಾಯಿತು , ಹರಾಜು ಕೂಗುವ ವ್ಯಕ್ತಿ ಸೀರೆ ತೋರಿಸುತ್ತಾ ಒಂದು ಸಾವಿರ ಎಂದನು . ಶ್ರೀಮಂತ ‘ ಎರಡು ಸಾವಿರ ‘ ಎಂದನು , ತಕ್ಷಣವೇ ಗುಂಪಿನಿಂದ ಐದು ಸಾವಿರ ‘ ಎಂಬ ಕೂಗು ಕೇಳಿಸಿತು . ಶ್ರೀಮಂತನಿಗೆ ಆಶ್ಚರ್ಯವಾಯಿತು . ನೋಡುತ್ತಾನೆ .

ತನ್ನ ಹಳ್ಳಿಯ ಬಡ ಕುಟುಂಬದ ವ್ಯಕ್ತಿಯೊಬ್ಬ ಕೂಗಿದ್ದು ! ಶ್ರೀಮಂತ ಏನನ್ನೂ ತೋರಿಸಿಕೊಳ್ಳದೆ ಮತ್ತೆ ಹತ್ತು ಸಾವಿರ ಎಂದನು . ಶ್ರೀಮಂತನ ಕೂಗಿಗೆ ಪ್ರತಿಯಾಗಿ “ ನನ್ನ ಇಡೀ ಆಸ್ತಿ ‘ ಎಂದು ಬಿಟ್ಟಿ ಬಡವ . ಇದನ್ನು ಕೇಳಿದ ಶ್ರೀಮಂತ ಆತನ ಸರಿಸಮಾನವಾಗಿ ಕೂಗಲು ಧೈರ್ಯ ಬರಲಿಲ್ಲ .

ಏನೂ ಮಾತು ಹೊರಡಲಿಲ್ಲ. ಮುಖಭಂಗವಾದಂತಾಗಿ ಮೆಲ್ಲನೆ ಕಾಲುಕಿತ್ತನು .

#4. Kannada Story – “ಅನಾಥ ಅಣ್ಣ ತಂಗಿ”

ಅವರಿಬ್ಬರಿದ್ದರು, ಪುಟಾಣಿ ಅಣ್ಣ, ಪುಟ್ಟ ತಂಗಿ. ಇಬ್ಬರಂದರೆ ಇಬ್ಬರೇ. ಪೂರಾ ಅನಾಥರು. ಹಾ! ಅವರ ಹತ್ತಿರ ಕೆಂಪು ಜುಟ್ಟಿನ ಹುಂಜವೊಂದಿತ್ತು. ಅದೆಂದರೆ ಇಬ್ಬರಿಗೂ ಬಹಳ ಪ್ರೀತಿ.

ಒಂದು ದಿನ ತಂಗಿಗೆ ವಿಪರೀತ ಹಸಿವಾಯ್ತು. ಮನೇಲಿ ತಿನ್ನಲಿಕ್ಕೆ ಏನೂ ಇಲ್ಲ! ಸರಿ. ಅಣ್ಣ ಮನೆಯ ಮೂಲೆಮೂಲೆ ಹುಡುಕಿದ. ಕಣಜದ ಬುಡದಲ್ಲೊಂದಷ್ಟು ಗೋಧಿಕಾಳು ಸಿಕ್ಕವು. ಅದನ್ನೇ ಬೀಸಿ ತಂಗಿಗೆ ಚಪಾತಿ ಮಾಡಿಕೊಡುವಾ ಅಂತ ಅಣ್ಣ ಅವನ್ನು ಒಟ್ಟುಮಾಡಿದ. ಇನ್ನೇನು ಬೀಸಬೇಕು, ಹುಂಜ ಅವನನ್ನ ತಡೆಯಿತು. ಒಂದು ಕಾಳು ಗೋಧಿಯನ್ನ ಬಿತ್ತಲು ಹೇಳಿತು. ಹುಡುಗ ಹಾಗೇ ಮಾಡಿದ.

ಮಾರನೆ ದಿನ ಬಾಗಿಲು ತೆರೆದಾಗ ನೋಡುವುದೇನು? ಅಂವ ಬಿತ್ತಿದ ಗೋಧಿಕಾಳು ಮುಗಿಲು ಮೀರಿ ಬೆಳೆದಿತ್ತು. ಅಂಗಳ ತುಂಬ ಹರಡಿತ್ತು ಅದರ ದಪ್ಪ ಕಾಂಡ. ಹುಡುಗನಿಗೆ ಕುತೂಹಲ ತಡೆಯದೆ ಸರಸರನೆ ಕಾಂಡವೇರುತ್ತ ಹೋದ. ಹೋಗುತ್ತ ಹೋಗುತ್ತ ಮೋಡಗಳನ್ನೂ ದಾಟಿ, ಆಕಾಶದ ನೀಲಿಯನ್ನೂ ದಾಟಿ…. ಗೋಧಿ ಗಿಡದ ತುದಿ ಮುಗಿಯುವಲ್ಲಿ ಒಂದು ಮನೆಯ ಎದುರು ಬಂದು ನಿಂತ.

ಆ ಮನೆಯೊಳಗಿಂದ ಘಮಘಮ ವಾಸನೆ…. ಹುಡುಗ ಹೋಗಿ ನೋಡುತ್ತಾನೆ…. ಒಂದು ಮಾಟಾಗಾತಿ ಮುದುಕಿ ಬೀಸೇಕಲ್ಲು ಬೀಸುತ್ತ ಕುಳಿತಿದೆ. ಅದರಿಂದ ದಂಡಿಯಾಗಿ ದೋಸೆಗಳು, ಕಡಬುಗಳು, ಹೋಳಿಗೆ, ಚಕ್ಕುಲಿ, ಕೋಡುಬಳೆ…

ಆಹ್! ಸೊರಸೊರನೆ ಬಾಯಲ್ಲಿ ನೀರೂರಿತು ಹುಡುಗನಿಗೆ!!

ಹಾಗೇ ನೋಡುತ್ತ ನಿಂತವನಿಗೆ ಮುದುಕಿಯ ಎಡಗಣ್ಣು ಕುರುಡು ಅಂತ ಗೊತ್ತಾಯಿತು. ಅದಕ್ಕೇ, ಕಳ್ಳಬೆಕ್ಕಿನ ಹಾಗೆ ಹೆಜ್ಜೆಯಿಡುತ್ತ ಎಡಬದಿಯಿಂದಲೇ ಮೆಲ್ಲನೆ ನುಸುಳಿ ಅಂಗಿಯನ್ನ ಕೊಟ್ಟೆಯ ಹಾಗೆ ಮಾಡಿಕೊಂಡು ಕೈಲಾದಷ್ಟು ತಿಂಡಿಯನ್ನು ಬಾಚಿಬಾಚಿ ತುಂಬಿಕೊಂಡ. ಮತ್ತೆ ಸರಸರನೆ ಕಾಂಡ ಇಳಿದು ಮನೆ ಸೇರಿದ.

ಅಣ್ಣ ತಂಗಿ ಹೊಟ್ಟೆ ತುಂಬ ತಿಂಡಿಗಳನ್ನು ತಿಂದರು. ಕೆಂಪುಜುಟ್ಟಿನ ಹುಂಜವೂ ಕೊಕ್ಕೊಕ್ಕೋ ಅನ್ನುತ್ತ ಕುಕ್ಕಿ ಕುಕ್ಕಿ ತಿಂದಿತು.

ಮತ್ತೆ ಮಾರನೇ ದಿನವೂ ಹುಡುಗ ಕಾಂಡವೇರಿ ಮಾಟಾಗಾತಿಯ ಮನೆಯಿಂದ ತಿಂಡಿ ಹೊತ್ತು ತಂದ. ಹೀಗೇ ನಾಲ್ಕೈದು ದಿನ ಸಾಗಿತು.

ಅದೊಂದು ದಿನ ಒಕ್ಕಣ್ಣಿನ ಮಾಟಗಾತಿ ತನ್ನ ಕುರುಡನ್ನ ಎಡದಿಂದ ಬಲಗಣ್ಣಿಗೆ ಬದಲಿಸಿಕೊಂಡು ಕುಂತಿತ್ತು. ದಿನದಿನವೂ ತಾನು ಬೀಸಿ ಪಡೆದ ತಿಂಡಿಯಲ್ಲಿ ಕಡಿಮೆಯಾಗ್ತಿದೆಯಲ್ಲ ಅಂತ ಅದಕ್ಕೆ ಅನುಮಾನ. ಎಂದಿನಂತೆ ತಿಂಡಿ ಕದಿಯಲು ಹೋದ ಹುಡುಗ ಸಿಕ್ಕಿಬಿದ್ದ!

ಕಟಕಟ ಹಲ್ಲುಕಡಿಯುತ್ತ ಮಾಟಗಾತಿ “ಹುಡುಗಾ! ನೀನೇಯೋ ಇಷ್ಟು ದಿನದಿಂದ ನನ್ನ ತಿಂಡಿಯನ್ನ ಕದೀತಿದ್ದಿದ್ದು? ತಡಿ! ನಿಂಗೆ ತಕ್ಕ ಶಾಸ್ತಿ ಮಾಡ್ತೀನಿ!!” ಅಂತ ಕೂಗಾಡಿತು. ಹಂಡೆಯ ನೀರು ಕಾಯಿಸಲಿಕ್ಕೆ ಹುಡುಗನ್ನೇ ಕಟ್ಟಿಗೆ ಹಾಗೆ ಉರಿಸ್ತೀನಿ ಅಂದುಕೊಂಡಿತು ಮುದುಕಿ. ಸೀದಾ ನೀರೊಲೆ ಹತ್ತಿರ ಕರಕೊಂಡು ಹೋಗಿ ಒಲೆಯೊಳಗೆ ತೂರಲು ಹೇಳಿತು. ಇಷ್ಟೆಲ್ಲ ಅದರೂ ನಮ್ಮ ಹುಡುಗ ಸ್ವಲ್ಪವೂ ಹೆದರಲಿಲ್ಲ. ಒಲೆ ಹತ್ತಿರ ಹೋಗಿ ತಾನು ಅದರಲ್ಲಿ ಹಿಡಿಸೋಲ್ಲ ಅಂತ ನಾಟಕವಾಡಿದ. ಮುದುಕಿ ರೇಗಿ, ಮೈ ಮಡಚಿ ತೂರಿಕೋ ಹುಡುಗಾ ಅಂತು. ಊಹೂಂ. ನಮ್ಮ ಹುಡುಗನ ನಾಟಕವೋ ನಾಟಕ! ಕೊನೆಗೆ, “ನೀನೇ ತೋರಿಸು ಮುದುಕೀ, ಹೇಗೆ ತೂರಬೇಕು ಅಂತ?” ಅಂದ. ಸರಿ. ಮುದುಕಿ ಒಲೆಯೊಳಗೆ ತೂರಿಕೊಂಡಳು. ಹುಡುಗ ಅದೇ ಸಮಯ ಅನ್ನುತ್ತ, ಸೀಮೆ ಎಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿ ಮಾಟಗಾತಿಯನ್ನ ಸುಟುಬಿಟ್ಟ. ಆಮೇಲೆ ಸೀದಾ ಮಾಯದ ಬೀಸೇಕಲ್ಲನ್ನ ಹಿಡಿದು ಗೋಧಿ ಗಿಡ ಇಳಿದು ಮನೆ ಸೇರಿದ. ಆಮೇಲೆ ಅಣ್ಣ ತಂಗಿ ಸೇರಿ ಗಿಡದ ಕಾಂಡ ಕತ್ತರಿಸಿ ಹಾಕಿದರು!

ಆಮೇಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!!

ಆ ಊರಲ್ಲೊಬ್ಬ ದುಷ್ಟ ರಾಜ. ಅವನಿಗೆ ಅಣ್ಣ ತಂಗಿಯರ ಹತ್ತಿರ ಮಾಯದ ಬೀಸೇಕಲ್ಲಿರುವ ಸಂಗತಿ ತಿಳಿಯಿತು. ಆ ಮಕ್ಕಳಿಂದ ಅವನು ಅದನ್ನ ಕಿತ್ತುಕೊಳ್ಳಲು ಉಪಾಯ ಮಾಡಿದ. ಬೀಸೇಕಲ್ಲನ್ನು ನೋಡಿಕೊಡುವುದಾಗಿ ಅದನ್ನ ತೆಗೆದುಕೊಂಡು ಬೇರೆಯದೇ ಒಂದನ್ನ ಕಳಿಸಿಕೊಟ್ಟ.

ಎಂದಿನಂತೆ ಮಕ್ಕಳು ತಿಂಡಿಗಾಗಿ ಕಲ್ಲು ಬೀಸುತ್ತಾರೆ, ಅಲ್ಲೇನಿದೆ!? ಧೂರ್ತ ರಾಜ ನ್ಯಾಯ ಕೇಳಲು ಬಂದ ಅಣ್ಣ ತಂಗಿಯನ್ನ ಗಡೀಪಾರು ಮಾಡಿಬಿಟ್ಟ.

ಸರಿ… ನಮ್ಮ ಕೆಂಪುಜುಟ್ಟಿನ ಹುಂಜ ಈಗ ಬೀದಿಗೆ ಬಂತು. ಬಂದು ಬೇಲಿಗಳ ಮೇಲೆ ನಿಂತು ಜೋರಾಗಿ ಕೂಗತೊಡಗಿತು. “ಕೊಕ್ಕೊಕ್ಕೋ ಕೊಕ್ಕೊಕ್ಕೋ… ಈ ದುಷ್ಟ ರಾಜ ಪಾಪದ ಬಡ ಮಕ್ಕಳಿಗೆ ಮೋಸ ಮಾಡಿ ಅವರ ಬೀಸೇಕಲ್ಲು ಕಿತ್ತುಕೊಂಡಿದ್ದಾನೆ…ಅಲ್ಲಿ ಆ ಪಾಪದ ಮಕ್ಕಳು ಉಪವಸವಿದ್ದರೆ, ಇವನಿಲ್ಲಿ ಬಗೆಬಗೆಯ ಭಕ್ಷ್ಯ ತಿನ್ನುತ್ತಿದ್ದಾನೆ! ನಾಚಿಕೆಗೇಡು, ನಾಚಿಕೆಗೇಡು!!”

ಕೆಂಪು ಜುಟ್ಟಿನ ಹುಂಜದ ಕೂಗು ಕೇಳಿ ಜನರು ಆಶ್ಚರ್ಯಪಟ್ಟರು. ಗುಸುಗುಸು ಮಾಡುತ್ತ ಹುಂಜದ ಬಳಿ ಹೋಗಿ ಏನು ಎತ್ತ ತಿಳಿದುಕೊಂಡರು.

ಹೀಗೆ ಕೆಂಪುಜುಟ್ಟಿನ ಹುಂಜ ಗಲ್ಲಿ ಗಲ್ಲಿಯಲ್ಲಿ ಕೊಕ್ಕೊಕ್ಕೋ ಅನ್ನುತ್ತ ರಾಜನ ವಿರುದ್ಧ ಕೂಗುತ್ತ ಕೊನೆಗೆ ರಾಜಬೀದಿಗೂ ಬಂತು. ಅಲ್ಲಿ ರಾಣಿಯ ಅಂತಃಪುರದ ಕಿಟಕಿ ಮೇಲೆ ನಿಂತು, “ಕೊಕ್ಕೊಕ್ಕೋ… ಮಕ್ಕಳ ಕೈಯಿಂದ ಬೀಸೇಕಲ್ಲು ಕಿತ್ತುಕೊಂಡ ರಾಜನ ಹೆಂಡತಿಯೇ…” ಅನ್ನುತ್ತ ರಾಣಿಯನ್ನು ಛೇಡಿಸಿತು. ರಾಣಿಗೆ ನಾಚಿಕೆಯಾಗಿ ರಾಜನೊಟ್ಟಿಗೆ ಜಗಳವಾಡಿದಳು.

ಆ ಹೊತ್ತಿಗೆ ಜನಗಳೂ ರಾಜನ ಬಗ್ಗೆ ಮಂತ್ರಿಯ ಬಳಿ ವಿಚಾರಿಸತೊಡಗಿದ್ದರು. ಅತ್ತ ಕೆಂಪುಜುಟ್ಟಿನ ಹುಂಜ ಮಾತ್ರ ತನ್ನ ಪಾಡಿಗೆ ಕೂಗು ಮುಂದುವರಿಸಿತ್ತು.

ರೇಜಿಗೆ ಬಿದ್ದ ರಾಜ ಹುಂಜವನ್ನ ಹಿಡಿಸಿ ಸೆರೆಮನೆಗೆ ಹಾಕಿಸಿದ. ಅದು ಅಲ್ಲೂ ತನ್ನ ಕೆಲಸ ಮುಂದುವರೆಸಿತು.

ಈಗಂತೂ ರಾಜನ ತಲೆ ಕೆಟ್ಟುಹೋಯ್ತು. ಅದನ್ನ ಕೊಯ್ದು ಸಾರು ಮಾಡಿ ಬಡಿಸುವಂತೆ ಆಜ್ಞೆ ಮಾಡಿದ. ಅಡುಗೆಯವರು ಕೂಗುತ್ತಿದ್ದ ಹುಂಜವನ್ನ ಕೊಯ್ದು ಮಸಾಲೆ ಅರೆದು ಸಾರು ಮಾಡಿದರು.

ಈಗ ರಾಜನಿಗೆ ಸಂತ್ರುಪ್ತಿ. ಖುಶಿಖುಶಿಯಾಗಿ ತಾನೊಬ್ಬನೇ ಅಷ್ಟೂ ಸಾರು ಸುರಿದುಕೊಂಡು ತಿಂದುಬಿಟ್ಟ!

ಊಟ ಮಾಡಿ ಮಲಗುವ ಕೋಣೆಗೆ ಹೋದ ರಾಜನ ಹೊಟ್ಟೆಯಿಂದ ಮತ್ತೆ ಹುಂಜದ ಕೂಗು!

“ಕೊಕ್ಕೊಕ್ಕೋ! ದುಷ್ಟ ರಾಜ ಮಕ್ಕಳಿಂದ ಬೀಸೇಕಲ್ಲು ಕಿತ್ತುಕೊಂಡ. ಕೆಂಪು ಜುಟ್ಟಿನ ಹುಂಜ- ನನ್ನನ್ನು ಸೆರೆಮನೆಗೆ ತಳ್ಳಿದ. ಈಗ ಈ ದುಷ್ಟ ನನ್ನನ್ನು ಬೇಯಿಸಿ ತಿಂದಿದ್ದಾನೆ! ಅಲ್ಲಿ ಬಡ ಮಕ್ಕಳು ಉಪವಾಸ ಬಿದ್ದಿದ್ದರೆ, ಇಲ್ಲಿ ರಾಜ ತಿಂದು ತೇಗುತ್ತಿದ್ದಾನೆ!”

ಈಗಂತೂ ರಾಜನಿಗೆ ಬೊಗಸೆ ನೀರಲ್ಲಿ ಮುಳುಗಿ ಸಾಯುವಷ್ಟು ನಾಚಿಕೆಯಾಯ್ತು. ಅವನು ಹೋದಲ್ಲಿ ಬಂದಲ್ಲೆಲ್ಲ ಕೆಂಪುಜುಟ್ಟಿನ ಹುಂಜದ ಕೊಕ್ಕೊಕ್ಕೋ ನಡೆದೇ ಇತ್ತು! ಕೈಕೈ ಹಿಸುಕಿಕೊಂಡ ರಾಜ, ಅವಮಾನ ತಾಳಲಾರದೆ ತಿಂದಿದ್ದೆಲ್ಲ ಕಕ್ಕಿಕೊಂಡ. ಕೆಂಪುಜುಟ್ಟಿನ ಹುಂಜ ಇಡಿಇಡಿಯಾಗಿ ಹೊರಬಂದು ಅರಮನೆ ಬೇಲಿಯತ್ತ ಹಾರಿಹೋಯ್ತು. ಮತ್ತೆ ತನ್ನ ಕೂಗು ಮುಂದುವರೆಸಿತು.

ಈಗಂತೂ ರಾಣಿ ರಾಜನನ್ನ ತರಾಟೆಗೆ ತೆಗೆದುಕೊಂಡಳು. ಬೀಸೇಕಲ್ಲು ಕೊಟ್ಟುಬಿಡು ಅಂತ ಬುದ್ಧಿ ಹೇಳಿದಳು. ಕೊನೆಗೂ ರಾಜ ಕೆಂಪುಜುಟ್ಟಿನ ಹುಂಜದ ಕಾಟಕ್ಕೆ ಬೇಸತ್ತು ಆ ಮಕ್ಕಳನ್ನು ಕರೆಸಿದ. ಅವರ ಬೀಸೇಕಲ್ಲು ಅವರಿಗೆ ಮರಳಿಸಿದ.

ಆಮೇಲಿಂದ ಅಣ್ಣ ತಂಗಿ ದಿನವೂ ಬೀಸೆಕಲ್ಲು ಬೀಸಿ ಬೀಸಿ ರುಚಿರುಚಿಯಾದ ತಿಂಡಿಗಳನ್ನು ಪಡೆಯುತ್ತ, ಬಡವರಿಗೆಲ್ಲ ಹಂಚುತ್ತ ನೂರು ವರ್ಷ ಸುಖವಾಗಿದ್ದರು.

ಕೆಂಪುಜುಟ್ಟಿನ ಹುಂಜವೂ ರಾಜನ ಪ್ರಾರ್ಥನೆಗೆ ಒಪ್ಪಿ ಮುಂದೆ ಯಾವತ್ತೂ ಅವನ ವಿರುದ್ಧ ಕೂಗಲಿಲ್ಲ. ತಾನೂ ತಿಂಡಿಯಲ್ಲಿ ಪಾಲು ಪಡೆದು ಅಣ್ಣ ತಂಗಿಯರೊಟ್ಟಿಗೆ ಸುಖವಾಗಿ ಇದ್ದುಬಿಟ್ಟಿತು!

#5. Kannada Story – “ಬಸ್ಯ, ಸಿಂಗ ಮತ್ತು ಅಗಸನ ಕಲ್ಲು”

ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ ಬಸ್ಯ ಇರ್ಲೇಬೇಕು. ಹಾಂಗಿತ್ತು ಅವರ ದೋಸ್ತಿ.
ಒಂದಿನ ಬಸ್ಯ ಮತ್ತು ಸಿಂಗ ಅದೆಲ್ಲಿಗೂ ದೂರದೂರಿಗೆ ಹೊರಟ್ರು. ಹೋಗ್ತಾ ಹೋಗ್ತಾ ಕತ್ಲಾಯ್ತಾ, ಸರಿ. ಒಂದ್ ಮರದ್ ಕೆಳಗೆ ಅಡ್ಡಾದ್ರು. ಸಿಂಗ ತನ್ ಯಜಮಾನನ್ನ “ಒಂದ್ ಕಥೆ ಹೇಳು…. ಒಂದ್ ಕಥೆ ಹೇಳು” ಅಂತ ಪೀಡಿಸ್ದ. ಆದ್ರೆ ಅಗಸಂಗೆ ಅದಾಗ್ಲೇ ಕಣ್ಣು ಕುಗುರ್ತಿತ್ತು. ಸಿಂಗನ ಹಟಕ್ಕೆ ಜಗ್ಗದೆ ಅಂವ ಹಾಗೇ ನಿದ್ದೆ ಹೋದ.

ಹೀಗೆ ಅಗಸ ಗಾಢ ನಿದ್ದೆಯಲ್ಲಿದ್ದಾಗ ಅವನ ಹೊಟ್ಟೇಲಿದ್ದ ನಾಲ್ಕು ಕಥೆಗಳು ಎದ್ದು ಬಂದು ಅವನ ಮೈಮೇಲೆ ಕೂತ್ಕೊಂಡ್ವು. ಕೂತು ಮಾತಾಡ್ಲಿಕ್ ಶುರು ಮಾಡಿದ್ವು. ಅವಕ್ಕೆ ತುಂಬ ಕೋಪ ಬಂದಿತ್ತು. “ಅಲ್ಲ, ಚಿಕ್ಕಂದಿಂದ್ಲು ಈ ಅಗಸಂಗೆ ನಮ್ ವಿಷಯ ಚೆನ್ನಾಗ್ ಗೊತ್ತಿದೆ. ಆದ್ರೂ ಯಾರಿಗೂ ಇವ್ನು ನಮ್ ಬಗ್ಗೆ ಹೇಳೋಲ್ವಲ್ಲ ಯಾಕೆ? ಮತ್ಯಾಕೆ ನಾವು ಅವ್ನ ಹೊಟ್ಟೇಲಿರ್ಬೇಕು? ನಾವು ಅವನನ್ನ ಕೊಂದು ಬೇರೆಲ್ಲಿಗಾದ್ರೂ ಹೊರಟ್ ಹೋಗೋಣ” ಅಂತ ಮಾತಾಡ್ಕೊಂಡ್ವು.

ಅವರ ಮಾತು ಸಿಂಗನಿಗೆ ಕೇಳಿಸ್ಬಿಡ್ತು. ಮುಂದೇನು ಮಾತಾಡ್ತಾರೋ ಅಂತ ನಿದ್ದೆ ನಟಿಸ್ತ ಅವುಗಳ ಮಾತನ್ನ ಕಿವಿಕೊಟ್ಟು ಕೇಳಿಸ್ಕೊಂಡ. ಮೊದಲ ಕಥೆ ಹೇಳ್ತು. “ಈ ಅಗಸ ಬೆಳಗ್ಗೆ ಎದ್ದು ಬುತ್ತಿ ಬಿಚ್ಚಿ ತಿನ್ನೋಕೆ ಕೂರ್ತಾನಲ್ಲ, ಆಗ ನಾನು ಮುಳ್ಳಾಗಿ ತುತ್ತಿನೊಳಗೆ ಸೇರ್ಕೊಂಡು ಅವನ ಗಂಟಲಿಗೆ ಚುಚ್ಚಿ ಕೊಲ್ತೀ ನಿ”. “ಒಂದು ವೇಳೆ ಅಂವ ಸಾಯದಿದ್ರೆ ನಾನು ಇದೇ ಮರದೊಳಗೆ ಸೇರ್ಕೊಂಡು ಅವನ ಮೇಲೆ ಬಿದ್ದು ಸಾಯಿಸ್ತೀನಿ” ಅಂತು ಎರಡನೆ ಕಥೆ. ಮೂರನೆಯದು, “ನಿಮ್ಮಿಬ್ಬರ ಕೈಲಿ ಆಗದಿದ್ರೆ ನಾನು ಇಲ್ಲೇ ಹತ್ತಿರ ಇರೋ ಆ ಹುತ್ತದಲ್ಲಿ ಹಾವಾಗಿ ಕಾದು ಕೂತು ಅವನನ್ನ ಕಚ್ತೀನಿ” ಅಂತು.

ಕೊನೆಗೆ ನಾಲ್ಕನೇ ಕಥೆ, ಈ ಯಾವುದ್ರಿಂದ್ಲೂ ಅಂವ ಸಾಯ್ದೆ ಹೋದ್ರೆ, ಅಂವ ಹೊಳೆ ದಾಟ್ತಾನಲ್ಲ, ಆಗ ದೊಡ್ಡ ತೆರೆಯಾಗಿ ಬಂದು ಅವನನ್ನ ಕೊಚ್ಕೊಂಡು ಹೋಗ್ತೀನಿ” ಅಂತ ಹೇಳ್ತು.
ಅವುಗಳಲ್ಲಿ ಒಂದು ಕಥೆಗೆ ತಮ್ಮ ಮಾತನ್ನ ಯಾರಾದ್ರೂ ಕೇಳಿಸ್ಕೊಂಡ್ರೆ ಅನ್ನೋ ಅನುಮಾನ ಬಂತು. ನಾಲ್ಕೂ ಕಥೆಗಳು ಸೇರಿ, ಯಾರಾದ್ರೂ ಅಗಸನಿಗೆ ತಮ್ಮ ಮಾತುಗಳ್ನ ತಿಳಿಸಿದ್ರೆ ಅವ್ರು ಕಲ್ಲಾಗ್ತಾರೆ ಅಂತ ಶಾಪ ಕೊಟ್ವು.

ಬೆಳ್ಗಾಯ್ತು. ಹತ್ರ ಇದ್ದ ನದೀಲಿ ಮುಖ ತೊಳ್ಕೊಂಡ್ ಬಂದ ಅಗಸ ಬುತ್ತಿ ಬಿಚ್ಚಿ ತಿನ್ನೋಕೆ ಕೂತ. ಆಗ ಸಿಂಗ ಓಡಿ ಬಂದವ್ನೇ ತನ್ನ ಮೂತಿಯಿಂದ ಅನ್ನದ ಬಟ್ಟಲನ್ನ ತಳ್ಳಿ ಚೆಲ್ಲಿಬಿಟ್ಟ. ಸಿಟ್ಟಿಗೆದ್ದ ಅಗಸ ಇನ್ನೇನು ಹೊಡೀಬೇಕು ಅನ್ನುವಾಗ ಅವಂಗೆ ಚೆಲ್ಲಿದ ಅನ್ನದಲ್ಲಿ ಮುಳ್ಳುಗಳಿರೋದು ಕಾಣಿಸ್ತು.


ಈ ಸಂಗತಿಯಿಂದ ತಲೆಕೆಟ್ಟ ಅಗಸ ಇನ್ನೇನು ಸುಧಾರಿಸ್ಕೊಳ್ಬೇಕು ಅನ್ನುವಾಗ ಇದ್ದಕ್ಕಿದ್ದಹಾಗೇ ಓಡಿಬಂದ ಸಿಂಗ ತನ್ನ ಯಜಮಾನನ ಪಂಚೆ ಹಿಡಿದು ಎಳೆದು ಎಳೆದೂ ಎಲ್ಲಿಗೋ ಕರೆಯತೊಡಗಿದ. ಅಗಸನೂ ಸಿಟ್ಟಿಗೆದ್ದು ಹೊರಟ. ಇನ್ನೇನು ಅಂವ ಮರದ ಬುಡದಿಂದ ಎದ್ದಿರಬೇಕು, ರೆಂಬೆಯೊಂದು ಧೊಪ್ಪೆಂದು ಬಿದ್ದ ಸದ್ದು!
ಸರಿ. ಅಗಸ ಇನ್ನು ಅಲ್ಲಿಂದ ಹೊರಡೋದೇ ವಾಸಿ ಅಂದುಕೊಂಡ. ತನ್ನ ಬಟ್ಟೆಗಂಟು ಸರಿ ಮಾಡಿಕೊಳ್ಳತೊಡಗಿದ. ಅಲ್ಲೇ ಹತ್ತಿರವಿದ್ದ ಹುತ್ತದಿಂದ ಹಾವು ಹೊರಬಂತು. ಅದನ್ನೇ ಕಾಯ್ತಿದ್ದ ಸಿಂಗ, ತನ್ನ ಗೊರಸಿಂದ ಅದನ್ನ ತುಳಿತುಳಿದು ಕೊಂದು ಹಾಕಿದ.
ಅಗಸ ‘ಭಲಾ…!’ ಅಂತ ಬೆನ್ನು ನೇವರಿಸಿ ಹೊಳೆಯತ್ತ ಹೊರಟ. ಅಲ್ಲೂ ಭಾರೀ ತೆರೆ ಬರೋದನ್ನ ನೋಡಿದ ಸಿಂಗ, ಯಜಮಾನನ್ನ ಬೆನ್ನ ಮೇಲೆ ಕೂರಿಸ್ಕೊಂಡು ಆಚೆ ದಡಕ್ಕೆ ಕರೆದೊಯ್ದ.

ಅಷ್ಟೂ ಹೊತ್ತು ಸುಮ್ಮನಿದ್ದ ಅಗಸ ಸಮಾಧಾನವಾದ ಮೇಲೆ ಸಿಂಗನ್ನ ಕೇಳ್ದ, “ಪ್ರತಿ ಸಾರ್ತಿ ನೀನು ನನ್ ಜೀವ ಉಳಿಸ್ತಲೇ ಬಂದಿದೀಯ. ನಿಂಗೆ ನನ್ ವಿಷ್ಯ ಏನೋ ಗೊತ್ತಾಗಿದ್ದೆ. ಏನದು ಹೇಳು?”
ಊಹೂಂ… ಸಿಂಗ ಬಾಯಿ ಬಿಗಿದ್ಕೊಂಡು ನಿಂತುಬಿಟ್ಟ. ಅಗಸ ಪೀಡಿಸಿ ಪೀಡಿಸಿ ಕೇಳಿದಾಗ, ‘ಅದನ್ನ ಹೇಳಿದ್ರೆ ನಾನು ಕಲ್ಲಾಗಿಹೋಗ್ತೀನಿ’ ಅಂದ. ಆದ್ರೂ ಅಂವ ಬಿಡಲಿಲ್ಲ. ಹೇಳಲೇಬೇಕು ಅಂತ ಹಟ ಹಿಡಿದ. ಕೊನೆಗೆ ಸಿಂಗ ಕಥೆಗಳ ಮಾತನ್ನ ಹೇಳಿದ. ಹೇಳಿ ಮುಗೀತಲೇ ನಿಂತಲ್ಲಿ ಕಲ್ಲಾಗಿಹೋದ!

ನಾಲ್ಕು ನಾಲ್ಕು ಸಾರ್ತಿ ಜೀವ ಉಳಿಸಿದ ತನ್ನ ಪ್ರೀತಿಯ ಭಂಟ ಹಾಗೆ ನಿಜವಾಗಿಯೂ ಕಲ್ಲಾಗಿದ್ದು ನೋಡಿ ಕಣ್ಣೀರು ಸುರಿಸಿದ ಅಗಸ, ಆ ಕಲ್ಲಿನ ಮೇಲೆ ಬಟ್ಟೆ ಒಗೆಯೋದನ್ನ ರೂಢಿಸ್ಕೊಂಡ. ಹೀಗೆ ಸದಾ ತನ್ನ ಸಂಗಾತಿ ಜೊತೆ ಇರುವ ಸಮಾಧಾನ ಅವನದಾಗ್ತಿತ್ತು. ಮುಂದೆ ಊರಿನ ಜನ, ಹೊಳೆ ಹತ್ತಿರದ ಆ ಕಲ್ಲನ್ನ ‘ಅಗಸನ ಕಲ್ಲು’ ಅಂತ್ಲೇ ಕರೆದರು.

I hope you enjoyed reading above Kannada Stories. Read More Kannada Stories here