God Story Kannada – ಭೂಮಿ ತಾಯಿ ಸೃಷ್ಟಿ ದೇವತೆ ಯಾಗಿದ್ದು ಹೇಗೆ ?

Below is one of the god story kannada ಭೂಮಿ ತಾಯಿ ಸೃಷ್ಟಿ ದೇವತೆ ಯಾಗಿದ್ದು ಹೇಗೆ ?

ದೆವರು ಸೂರ್ಯ- ಚಂದ್ರರನ್ನು ಸೃಷ್ಟಿಸಿದ. ಸೂರ್ಯ- ಚಂದ್ರರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡೋರು. ಒಂದೇ ಹಾಸಿಗೆಯಲ್ಲಿ ಮಲಗೋರು. ಆಟ- ಊಟ- ಪಾಠ ಎಲ್ಲವೂ ಒಟ್ಟಿಗೆ. ಜಗಳ ಕಿತ್ತಾಟ ಒಂದೂ ಇಲ್ಲ. ಒಳ್ಳೆಯ ಸ್ನೇಹಿತರಂತೆ ಬೆಳೆಯತೊಡಗಿದರು. ಅವರ ಆಟ- ಪಾಠಗಳನ್ನು ಕಂಡು ದೇವರಿಗೆ ಸಂತೋಷವಾಯಿತು.

ಮುಂದೊಂದು ದಿನ ದೇವರು ಸೂರ್ಯ-ಚಂದ್ರರಿಗೆ ಮದುವೆ ಮಾಡಲು ಯೋಚಿಸಿದ. ಮದುವೆಯಾಗಲು ಅವರಿಬ್ಬರಿಗೆ ಒಪ್ಪಿಗೆಯೆ? ಎಂದು ಕೇಳಲಾಯಿತು. ಸೂರ್ಯ “ನನಗೇನೊ ಒಪ್ಪಿಗೆ. ಆದರೆ ಒಂದು ಷರತ್ತು’ ಎಂದ. ದೇವರು, “ಮದುವೆಯಾಗಲು ಷರತ್ತೆ? ಏನದು?’ಎಂದು ಕೇಳಿದ. “ನಾನು ಮತ್ತು ಚಂದ್ರ ಒಂದೇ ಹೆಣ್ಣನ್ನು ಮದುವೆಯಾಗುತ್ತೇವೆ. ಅದಕ್ಕೆ ಒಪ್ಪಿದರೆ ಮಾತ್ರ ಮದುವೆ; ಇಲ್ಲದಿದ್ದರೆ ಇಲ್ಲ’ ಎಂದುಬಿಟ್ಟ.

ಸೂರ್ಯನ ಮಾತಿಗೆ ಚಂದ್ರನೂ ಧ್ವನಿಗೂಡಿಸಿದ. ದೇವರಿಗೆ ದಿಕ್ಕೇ ತೋಚದಾಯಿತು. ಇಂತಹ ಯೋಜನೆ ಇರುವ ಇವರಿಬ್ಬರನ್ನು ದೂರ ದೂರ ಮಾಡಲೇಬೇಕೆನ್ಸಿಸಿತು. ತಲೆಯ ಮೇಲೆ ಕೈಹೊತ್ತು ಕುಳಿತ. ದೇವರು ಇದಕ್ಕೆ ಏನಾದರೂ ಮಾಡಬೇಕೆಂದು ತನ್ನ ಸಹ ದೇವತೆಗಳನ್ನೆಲ್ಲಾ ಗುಟ್ಟಾಗಿ ಕರೆದು ವಿಚಾರಿಸತೊಡಗಿದ.

ಆಗ ಭೂಮಿ, “ದೇವರೆ, ನಾನು ಅವರಿಬ್ಬರನ್ನು ದೂರ ಮಾಡುತ್ತೇನೆ. ನಿನ್ನ ಚಿಂತೆ ಬಗೆಹರಿಸುತ್ತೇನೆ’ ಎಂದಳು. ದೇವರಿಗೆ ಸಂತೋಷವಾಯಿತು. “ಅದೊಂದು ಕೆಲಸ ಮಾಡಿಬಿಟ್ಟರೆ, ನಿನಗೆ ಬೇಕಾದ್ದು ಕೊಡುತ್ತೇನೆ’ ಎಂದ.

ಒಂದು ದಿನ ಸೂರ್ಯ- ಚಂದ್ರ ಇಬ್ಬರೂ ಪರ್ವತದ ತುದಿಯಲ್ಲಿ ನಿಂತು ಮಾತನಾಡುತ್ತಿದ್ದರು. ಆಗ ಪರ್ವತದ ಬುಡದಲ್ಲಿ ನಿಂತ ಭೂಮಿ “ಓ ಚಂದ್ರ, ಸ್ವಲ್ಪ ಇಲ್ಲಿ ಬರುತ್ತೀಯಾ’ ಎಂದು ಕೂಗಿದಳು. ಚಂದ್ರ ಅಲ್ಲಿಂದಲೇ “ಏನು ಭೂಮಿ? ಏನ್ಸಮಾಚಾರ ಎಂದ. ಭೂಮಿ ಕಿವಿ ಕೇಳಿಸದವಳಂತೆ ನಟಿಸುತ್ತಾ “ಅಯ್ಯೋ ಕೇಳಿಸಲ್ಲ. ಇಲ್ಲೇ ಬಾರಪ್ಪ. ನಾನು ನಿನಗೆ ಏನೋ ಹೇಳಬೇಕು’ ಎನ್ನ ತೊಡಗಿದಳು. ಸೂರ್ಯನು ಚಂದ್ರನಿಗೆ ಅದೇನು ಹೋಗಿ ನೋಡಿ ಕೇಳಿಕೊಂಡು ಬಾ. ಪಾಪ, ಯಾವತ್ತೂ ಕರೆಯದವಳು ಇವತ್ತು ಕರೆಯುತ್ತಿದ್ದಾಳೆ’ ಎಂದು ಹೇಳಿದಾಗ ಚಂದ್ರ ಇಳಿದು ಬಂದ.

ಏನು ಭೂಮಿ? ಏಕೆ ಕರೆದೆ?’ ಎಂದ ಚಂದ್ರ. “ಏನಿಲ್ಲ, ಸುಮ್ಮನೆ! ನಿನ್ನನ್ನು ಹತ್ತಿರದಿಂದ ನೋಡಬೇಕೆನ್ನಿಸಿತು, ಕರೆದೆ. ಅಷ್ಟೆ’ ಎಂದಳು ಭೂಮಿ. “ಏನೊ ಹೇಳಬೇಕು ಅಂದೆ. ಅದೇನು ಹೇಳು’ ಎಂದ ಚಂದ್ರ. ಭೂಮಿ “ಅಯ್ಯೋ ಏನಿಲ್ಲ. ನನಗೆ ಅದೇನೊ ಮರತೇ ಹೋಯಿತು’ಎಂದು ಹೊರಟೇ ಬಿಟ್ಟಳು. ಚಂದ್ರ “ಇವಳೊಬ್ಬಳು’ ಎಂದುಕೊಳ್ಳುತ್ತ ಸೂರ್ಯನಲ್ಲಿಗೆ ಬಂದ.

ಸೂರ್ಯ “ಏನಂತೆ. ಭೂಮಿ ಏಕೆ ಕರೆದಿದ್ದಳು? ಎಂದು ಕೇಳಿದ. ಚಂದ್ರ “ಏನೂ ಇಲ್ಲ? ಎಂದರೂ, ಸೂರ್ಯ `ಏನೊ ಹೇಳಬೇಕು ಅಂತಲೇ ಕರೆದಿದ್ದಾಳೆ. ನೀನು ಏನೂ ಇಲ್ಲ ಅನ್ನುತ್ತಿಯಾ. ನನ್ನಿಂದ ಏನೊ ಮುಚ್ಚಿಡುತ್ತಿದ್ದೀಯಾ! ಅದೇನು ಹೇಳು’ ಎಂದ ಬೇಸರದಿಂದ. ಚಂದ್ರ ಏನಿಲ್ಲವೆಂದು ಎಷ್ಟು ಹೇಳಿದರೂ ಕೇಳದ ಸೂರ್ಯ, “ನಾವಿಬ್ಬರೂ ಒಂದೇ ಎನ್ನವಂತೆ ಇದ್ದವರು. ನಮ್ಮ ನಡುವೆ ನೀನು ಗುಟ್ಟು ಮಾಡಿಬಿಟ್ಟೆ. ಇಂದಿನಿಂದ ನಾವಿಬ್ಬರು ದೂರ ದೂರ” ಎಂದು ಹೊರಟೇಬಿಟ್ಟ. ಚಂದ್ರನಿಗೆ ಬಹಳ ಬೇಸರವಾದರೂ ಏನೂ ಮಾಡುವಂತಿರಲಿಲ್ಲ.

ಸೂರ್ಯ- ಚಂದ್ರರು ದೂರ ದೂರವಾದುದನ್ನು ಕಂಡು ಖುಷಿಯಿಂದ ದೇವರು ಭೂಮಿಗೆ “ಏನು ಬೇಕೊ ಅದನ್ನು ಕೇಳು. ಕೊಡುತ್ತೇನೆ’ ಎಂದ. ಭೂಮಿ “ದೇವರೆ, ನಿನ್ನಂತೆ ನನಗೂ ಸೃಷ್ಟಿಸುವ ಶಕ್ತಿ ಕೊಡು. ಗಿಡ, ಮರ, ಪ್ರಾಣಿ- ಪಕ್ಷಿ, ಕೀಟ, ಬೆಟ್ಟ, ಗುಡ್ಡ, ಪರ್ವತ, ನದಿ- ಹೊಳೆ, ಸಮುದ್ರ ಹೀಗೆ ಎಲ್ಲವನ್ನೂ ಸೃಷ್ಟಿಸುವ, ನಿನಗಿರುವ ಶಕ್ತಿಯನ್ನು ನನಗೂ ಕೊಡು’ ಎಂದು ಬೇಡಿದಳು.

ದೇವರು “ಭೂಮಿ ನಿನ್ನ ಬೇಡಿಕೆ ಅತಿಯಾಯಿತು. ಆದರೂ ಕೊಟ್ಟ ಮಾತಿನಂತೆ ನಾನು ನಿನಗೆ ಆ ಶಕ್ತಿ ನೀಡುತ್ತೇನೆ. ಆದರೆ, ಅದರ ಸತ್ತರಿಣಾಮಗಳನ್ನು ನೀನು ಅನುಭವಿಸುವಂತೆ ದುಷ್ಪರಿಣಾಮಗಳನ್ನೂ ಅನುಭವಿಸಲೇಬೇಕು. ತಥಾಸ್ತು’ ಎಂದ. ಅಂದಿನಿಂದ ಭೂಮಿ, ದೇವರಂತೆ ತಾನೂ ಸೃಷ್ಟಿಸುವ ಶಕ್ತಿಯನ್ನು ಪಡೆದಳು. ಅದರ ಜೊತೆಯಲ್ಲಿ ಭೂಕಂಪ, ಚಂಡಮಾರುತ, ಪ್ರವಾಹ, ಸುನಾಮಿ ಮೊದಲಾದ ದುಷ್ಪರಿಣಾಮಗಳನ್ನೂ ಎದುರಿಸುವಂತಾದಳು.!

We hope you enjoyed reading above god story kannada. Read more Inspiration Story here