ಕನ್ನಡ ನೀತಿ ಕಥೆಗಳು – ನಿಮ್ಮ ಜೀವನದ ಬೆಲೆ ಏನು ?

Here are the best ಕನ್ನಡ ನೀತಿ ಕಥೆಗಳು. ನಿಮ್ಮ ಮೌಲ್ಯ ಏನು ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ಕೆಳಗಿನ ಕಥೆಯನ್ನು ಓದಿ ನಿಮಗೆ ಆಶ್ಚರ್ಯವಾಗುತ್ತದೆ. Human beings possess an inherent worth that goes far beyond the material possessions they accumulate or the roles they fulfill in society. The concept of human value encompasses the unique qualities, contributions, and potential that each individual brings to the world. Understanding and recognizing the value of a human being is crucial for fostering personal growth, establishing meaningful connections, and building a harmonious society.

ಕನ್ನಡ ನೀತಿ ಕಥೆಗಳು

ಕಥೆ #1 – ನಿನ್ನ ಬೆಲೆ ಎಷ್ಟು..?

ನಿನ್ನ ಬೆಲೆ ಎಷ್ಟು..?

ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ ” ನನ್ನ ಜೀವನದ ಬೆಲೆ ಏನು ? “
ಎಂದು. ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ, ಆದರೆ ಅದನ್ನು ನೀನು ಮಾರಬಾರದು ಎಂದು ಹೇಳಿದನಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ‘ ಈ ಕಲ್ಲಿನ ಬೆಲೆ ಎಷ್ಟಿರಬಹುದು ? ‘ ಎಂದು ಕೇಳಿದನಂತೆ. ಅದಕ್ಕಾ ಹಣ್ಣಿನ ವ್ಯಾಪಾರಿ “ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ. ಮಾರುತ್ತೀಯಾ?” ಎಂದು ಕೇಳಿದನಂತೆ.

ಕನ್ನಡ ನೀತಿ ಕಥೆಗಳು - ನನ್ನ ಬೆಲೆ ಎಷ್ಟು

ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ ” ಈ ಕಲ್ಲಿನ ಬೆಲೆ ಎಷ್ಟಿರಬಹುದು? ” ಎಂದು ಕೇಳಿದನಂತೆ. ” ಈ ಕಲ್ಲಿಗೆ ನಾನು ಒಂದು 10 ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?” ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.

ಇದಾದ ಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ ” ಈ ಕಲ್ಲಿನ ಬೆಲೆ ಎಷ್ಟಿರಬಹುದು? ” ಎಂದು ಕೇಳಿದನಂತೆ. ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ “ಒಂದು 50 ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?” ಎಂದನಂತೆ.

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ “ಹೋಗಲಿ 4 ಕೋಟಿ ರೂಗಳನ್ನು ಕೊಡುತ್ತೇನೆ” ಎಂದನಂತೆ ಆ ಚಿನ್ನದ ವ್ಯಾಪಾರಿ.

ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು. ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, ‘ಇದನ್ನು ಮಾರುವುದಿಲ್ಲ’ ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ ‘ವಜ್ರ’ ಗಳ ವ್ಯಾಪಾರಿಯಲ್ಲಿಗೆ ಹೋಗಿ ” ” ಈ ಕಲ್ಲಿನ ಬೆಲೆ ಎಷ್ಟಿರಬಹುದು? ” ಎಂದು ಕೇಳಿದನಂತೆ. ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ ” ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? ” ಎಂದು ಕೇಳಿದನಂತೆ. ಮತ್ತು ನಾನು ನನ್ನ ಆಸ್ತಿಯನ್ನೆಲ್ಲಾ, ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ, ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ” ಎಂದನಂತೆ ಆ ವಜ್ರದ ವ್ಯಾಪಾರಿ.

ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ.

ಆಗ ದೇವರು “ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.

ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆ ಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ‘ ಅಮೂಲ್ಯ ‘ ಅಂದರೆ ಬೆಲೆಕಟ್ಟಲಾಗದ್ದು.

ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ. ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ.

ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ. ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ಯೋಗ್ಯತೆಯನ್ನು ತೋರುತ್ತದೆ.

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು. ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ ” ಎಂದನಂತೆ ಆ ದೇವರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು ಮಾನವ ಜನ್ಮ ಬಹು ಶ್ರೇಷ್ಠವಾದದ್ದು ಎಂದು.

ಹಾಗಾಗಿ, ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.!

ಕಥೆ #2 – ಮದುವೆ ಮನೆ ಊಟ (ಕರುಳು ಹಿಂಡುವ ಕಥೆ)

ಮದುವೆ ಮನೆಗಳಲ್ಲಿ ಊಟ ಮಾಡಿರಲಿ ಬಿಡಲಿ.. ತಪ್ಪದೇ ಈ ಕರುಳು ಹಿಂಡುವ ಕಥೆಯನ್ನೊಮ್ಮೆ ಓದಿ..

ಜಾನಕಿಯ ಮದುವೆ ಸಂಭ್ರಮ.. ಮನೆಯ ತುಂಬೆಲ್ಲಾ ಹೆಣ್ಣು ಮಕ್ಕಳು ಲಂಗ ರವಿಕೆ ತೊಟ್ಟು ಓಡಾಡುತ್ತಿದ್ದದ್ದು ಕಾಣುತ್ತಿತ್ತು.. ಅಮ್ಮನೋ ಪುರುಸೊತ್ತಿಲ್ಲದ ಹಾಗೆ ಕೆಲಸದ ಮೇಲೆ ಕೆಲಸ ಮಾಡುತ್ತಲೇ ಇದ್ದಳು..

ಅತ್ತ ಜಾನಕಿಯ ಅಪ್ಪ ನಾಗರಾಜಣ್ಣನಿಗೆ ಗಂಡಿನ ಮನೆಯಿಂದ ಫೋನ್ ಬಂದಿತು.. ನಮಗೆ ಎರೆಡು ಬಸ್ ಹೆಚ್ಚಿಗೆ ಬೇಕು.. ನಮ್ಮ ಕಡೆಯ ನೆಂಟರು ಹೆಚ್ಚಾಗಿದ್ದಾರೆ ಎಂದರು..

ತಡಬಡಾಯಿಸಿಕೊಂಡು.. ಆಯಿತು ಎಂದು ಫೋನ್ ಇಟ್ಟು ಹೋದ ನಾಗರಾಜಣ್ಣ.. ಶೆಟ್ಟರ ಬಳಿ ಅದೇನೋ ಮಾತು ಕತೆಯಾಡುತ್ತಲೇ ಇದ್ದ..

ನಂತರ ಎಲ್ಲರೂ ಮದುವೆ ಮನೆಗೆ ಹೊರಡುವ ಸಮಯ ಬಂದಿತು.. ಜಾನಕಿಯು ಮನೆಯಿಂದ ಬಲಗಾಲಿಟ್ಟು ಹೊರಗೆ ಬಂದದ್ದೇ ಸಾಕಿತ್ತು ಪ್ರೀತಿಯಿಂದ ಸಾಕಿದ ಅಪ್ಪ ಅಮ್ಮನ ಕಣ್ಣಲ್ಲಿ ಕಣ್ಣೀರು ಯಾರನ್ನೂ ಹೇಳದೇ ಕೇಳದೇ ಬಂದು ಸುರಿಯುತಿತ್ತು..

ಈ ಕಣ್ಣೀರೇ ಹೀಗೆ.. ಅದಕ್ಕೇ ಬುದ್ದೀನೇ ಇಲ್ಲ.. ಎಷ್ಟು ಅಳಬಾರದು ಎಂದರೂ ಕೇಳೋದೇ ಇಲ್ಲಾ ಅಲ್ವಾ.. ಅಪ್ಪ ಅಮ್ಮನನ್ನು ನೋಡಿದ ಜಾನಕಿ ಕೂಡ ಅಪ್ಪನನ್ನು ತಬ್ಬಿಕೊಂಡು ಅಳ ತೊಡಗಿದಳು.. ಅಪ್ಪನ ಹೊಸ ಶರ್ಟ್ ಎಲ್ಲಾ ಮಗಳ ಕಣ್ಣೀರು ತಾಕಿ ಕರೆಯಾಯಿತು..

ಮನೆ ಸದಸ್ಯರೆಲ್ಲರೂ ಕಾರ್ ಗೆ ಪೂಜೆ ಮಾಡಿ ಹತ್ತಿದರು.. ಸಂಬಂಧಿಕರೆಲ್ಲರೂ ಬಸ್ ಕಡೆ ಮುಖ ಮಾಡಿದರು.. ಅಬ್ಬಾ 2 ತಾಸಿನ ಜರ್ನಿ.. ಕೊನೆಗೆ ಮದುವೆ ಮಂಟಪ ಸಿಕ್ಕಿತು..

ಆರತಿ ಮಾಡಿ ವಧುವನ್ನು ಮದುವೆಯ ಮಂಟಪಕ್ಕೆ ಕರೆದೊಯ್ದರು.. ಸಂಜೆ ಯಾಗಿದ್ದರಿಂದ ಎಲ್ಲರಿಗೂ ಹೊಟ್ಟೆ ಸ್ವಲ್ಪ ಹಸಿವಲು ಶುರುವಾಯಿತು.. ಗಂಡಿನ ಮನೆಯವರಿಗಾಗಿ ಶಾವಿಗೆ ಉಪ್ಪಿಟ್ಟು ರೆಡಿಯಾಗುತಿತ್ತು.. ಅದರಲ್ಲೇ ಸ್ವಲ್ಪ ತಂದು ಎಲ್ಲರಿಗೂ ಬಡಿಸಿದರು..

ದೂರದಿಂದ ಯಾರೋ ಕೂಗಿದರು.. ನಾಗರಾಜಪ್ಪಾ……. ಎಲ್ಲಿದ್ದೀಯೋ ಮಾರಾಯಾ?? ಇಲ್ಲಿ ಗಂಡಿನ ಕಡೆಯವರು ಬಂದಿದ್ದಾರೆ.. ಏನೂ ಅಡುಗೆ ಮನೆ ಸೇರ್ಕೊಂಡ್ ಚೆನ್ನಾಗಿ ತಿಂತಾ ಕೂತ್ತಿದ್ದೀಯಾ ಅಂದರು..

ತಕ್ಷಣ ಇನ್ನೇನು ಬಾಯಿಗೆ ಮೊದಲ ತುತ್ತು ಇಡಬೇಕೆಂದಿದ್ದ ಶಾವಿಗೆ ಉಪ್ಪಿಟ್ಟನ್ನು ತಟ್ಟೆಯಲ್ಲೇ ಹಾಕಿ.. ಹೆಂಡತಿಗೆ ಕೊಟ್ಟು.. ತಿಂದುಕೋ ವೇಸ್ಟ್ ಆಗಿಬಿಡುತ್ತದೆ.. ಎಂದು ಹೊರ ನಡೆದ.. ಅಮ್ಮನೂ ಗಬಗಬನೇ ಆತುರದಿಂದ ತಿಂದು ಬಂದರು.. ಕಾರಣ ಮಧ್ಯಾಹ್ನ ನಾಗರಾಜಣ್ಣ ಹಾಗೂ ಶ್ರೀಮತಿಯವರು ಏನನ್ನೂ ತಿಂದಿರಲಿಲ್ಲ..

ಅತ್ತಕಡೆ ಗಂಡಿನ ಮನೆಯವರು ಅರಳಿ ಮರದ ಕಟ್ಟೆಯ ಬಳಿ ಕೂತಿದ್ದರು.. ವಾದ್ಯದ ಸಮೇತ ಸಂಬಂಧಿಕರ ಜೊತೆ ನಾಗರಾಜಣ್ಣ ಹೋಗಿ ಕಾಲು ತೊಳೆದು ಗಂಡನ್ನು ಹಾಗೂ ಗಂಡಿನ ಮನೆಯವರನ್ನು ಮದುವೆ ಮಂಟಪಕ್ಕೆ ಕರೆತಂದ..

ಬಂದವರೇ ಗಂಡಿನ ಅಮ್ಮ ನಮಗೇ 6 ರೂಮ್ ಬೇಕು ಎಂದರು.. 4 ಸಾಕು ಎಂದಿದ್ದಿರಲ್ಲಾ ತಾಯಿ ಎಂದು ನಾಗರಾಜಣ್ಣ ಕೇಳಿದ.. ಇಲ್ಲಾ ಇಲ್ಲಾ ನಮಗೆ ನೆಂಟರು ಜಾಸ್ತಿ 6 ರೂಮ್ ಬೇಕಲೇ ಬೇಕು ಎಂದರು..

ಮದುವೆ ಮನೆಯಲ್ಲಿ ವಧು ವರರ ಕೋಣೆ ಬಿಟ್ಟರೇ ಇದ್ದದ್ದೇ 6 ರೂಮು.. ತಕ್ಷಣ ತನ್ನ ಸಂಬಂಧಿಕರನ್ನು ಚೌಟರಿಯ ಪಕ್ಕದಲ್ಲಿದ್ದ ಸಣ್ಣ ಹೋಟೇಲ್ ಒಂದರಲ್ಲಿ ರೂಮ್ ಮಾಡಿ ಅಲ್ಲಿಗೆ ಕಳುಹಿಸಿಕೊಟ್ಟನು.. ಇತ್ತ 6 ರೂಮನ್ನು‌ ಗಂಡಿನ ಮನೆಯವರಿಗೆ ಬಿಟ್ಟು ಕೊಟ್ಟ ನಾಗರಾಜಣ್ಣ..

ಸರಿ.. ಶಾಸ್ತ್ರ ಸಂಪ್ರದಾಯಗಳು ಶುರುವಾದವು.. ಹುಡುಗನ ಹೆಸರು ರಾಮ್.. ರಾಮನ ಕೈ ಹಿಡಿಯಲು ಜಾನಕಿ ತಯಾರಾಗುತ್ತಿದ್ದಳು.. ಇತ್ತ ರಾಮ್ ಕೂಡ ಜಾನಕಿ ಎಲ್ಲಾದರೂ ಕಾಣಬಹುದೇನೋ ಎಂದು ಅಲ್ಲಿ ಇಲ್ಲಿ ಇಣುಕುತ್ತಲೇ ಇದ್ದ..

ಆನಂತರ ಗಂಡು ಹೆಣ್ಣನ್ನು ಅಕ್ಕ ಪಕ್ಕದಲ್ಲಿ ಕೂರಿಸಿ ಶಾಸ್ತ್ರ ಮಾಡಲು ಶುರು ಮಾಡಿದರು..

ಮಗಳ ಶಾಸ್ತ್ರವನ್ನು ಕಣ್ತುಂಬಿಕೊಳ್ಳಲು ನಾಗರಾಜಣ್ಣ ಹಾಗೂ ಶ್ರೀಮತಿ ಸಾವಿತ್ರಕ್ಕ ನಿಂತು ಮಗಳಿನ ಮಧು ಮಗಳ ಅಲಂಕಾರ ನೋಡಿ ಸಂತೋಷ ಪಡುತ್ತಿದ್ದರು..

ಅತ್ತ ಮತ್ತೆ ಇನ್ಯಾರೋ.. ನಾಗರಾಜಣ್ಣಾ ಈರುಳ್ಳಿ ತರಿಸಬೇಕಂತೆ.. ಭಟ್ಟರು ಕರಿತಿದಾರೆ ಬಾ ಎಂದರು.. ಪಂಚೆಯನ್ನು ಎತ್ತಿ‌ ಮೇಲಕ್ಕೆ ಕಟ್ಟಿಕೊಂಡು ಅಡುಗೆ ಮನೆ ಕಡೆ ಹೊರಟ ನಾಗರಾಜಣ್ಣ.. ಇತ್ತ ಇನ್ಯಾರೋ ಸಾವಿತ್ರಕ್ಕಾ ನೆಂಟರಿಗೆ ಕೊಡಬೇಕಾದ ತಾಂಬೂಲ ಎಲ್ಲಿಟ್ಟಿದ್ದೀಯಾ?? ಕೊಡು ಬಾ ಎಂದು ಕೂಗಿದರು.. ಸಾವಿತ್ರಕ್ಕಾ, ತಡಿ ಬಂದೆ ಎಂದು ಹೋಡಿ ಹೋದಳು..

ಜಾನಕಿ ತಲೆ ಎತ್ತಿ ನೋಡುವಷ್ಟರಲ್ಲಿ ಅಪ್ಪ ಅಮ್ಮ ಇಬ್ಬರೂ ಹೊರಟು ಹೋಗಿದ್ದರು.. ಕಣ್ಣಂಚಲ್ಲಿ ನೀರು ತುಂಬಿಕೊಂಡಿತು.. ಹೆಣ್ಣು ತನ್ನ ಈ ವಿಶೇಷ ಕ್ಷಣದಲ್ಲಿ ಅಪ್ಪ ಅಮ್ಮನಲ್ಲದೇ ಇನ್ಯಾರನ್ನು ಬಯಸುತ್ತಾಳೆ ಹೇಳಿ..

ಇನ್ನೇನು ಕಣ್ಣೀರು ಮದುವೆ ಮನೆಯ ನೆಲಕ್ಕೆ ಬೀಳಬೇಕು.. ಅಷ್ಟರಲ್ಲಿ ಪಕ್ಕದಲ್ಲಿದ್ದ ರಾಮ್ ಜಾನಕಿಯ ಕೈ ಯನ್ನು ಒತ್ತಿದ.. ಆ ಸ್ಪರ್ಶದಲ್ಲಿ.. ನಾನಿರುವೆ ಅಳಬೇಡ ಎಂಬ ಸಮಾಧಾನದ ಮಾತುಗಳು ಅಡಗಿದ್ದವು..

ಜಾನಕಿಗೆ ಅಷ್ಟೇ ಸಾಕಿತ್ತು.. ಕಣ್ಣು ಒರೆಸಿಕೊಂಡು ಸಮಾಧಾನ ಮಾಡಿಕೊಂಡಳು..

ಪುರೋಹಿತರು ರಾಮ್, ಜಾನಕಿಗೆ ಕುಂಕುಮ ಇಡು ಎಂದರು.. ಕುಂಕುಮ ಇಡಲು ಜಾನಕಿಗೆ ಬಹಳ ಹತ್ತಿರ ಬಂದ ರಾಮ್..‌ ನೀನು ಇಂದು ಬಹಳ ಸುಂದರವಾಗಿ ಕಾಣ್ತಿದ್ದೀಯಾ ಎಂದನು..

ಜಾನಕಿ ಅಯ್ಯೊ ಯಾರಾದರು ಕೇಳಿಸಿಕೊಂಡರೆ ಎಂದು.. ಕೇಳಿಯೂ ಕೇಳದವಳಂತೆ.. ತಲೆ ಬಗ್ಗಿಸಿಬಿಟ್ಟಳು..‌

ರಾಮ್ ಜಾನಕಿಗೆ ಕುಂಕುಮ ಇಡುವ ಆ ಸಂದರ್ಭ ಜಾನಕಿಯ ಜೀವನದ ಬಹು ಸಂತೋಷದ ಕ್ಷಣ ವಾಗಿತ್ತು..

ಶಾಸ್ತ್ರಗಳೆಲ್ಲಾ ಮುಗಿಯಿತು.. ರಾತ್ರಿ 12 ಆಯಿತು… ಜಾನಕಿ ಹೋಗಮ್ಮಾ ಮಲ್ಕೋ.. ಬೆಳಗ್ಗೆ ಬೇಗ ಏಳಬೇಕು.. ಇಲ್ಲದಿದ್ದರೆ ಮುಖ ಫ್ರೆಶ್ ಇರೊಲ್ಲಾ ಅಂತ ಹೇಳಿ ಅಮ್ಮ ಮಲಗಿಸಿದರು.. ನಾಗರಾಜಣ್ಣನೋ ಅಡುಗೆ ಮನೆ ಕಡೆ ಹೋದವನು ಮತ್ತೆ ಬರಲೇ ಇಲ್ಲ.. ಅಲ್ಲೇ ಒಂದರ ಮೇಲೊಂದು ಕೆಲಸದಲ್ಲಿ ತೊಡಗಿಕೊಂಡ…

ಮಧ್ಯ ರಾತ್ರಿ 2 ಘಂಟೆಯಾಗಿತ್ತು.. ನಾಗರಾಜಣ್ಣ ಶ್ರೀಮತಿ ಸಾವಿತ್ರಕ್ಕನ ಬಳಿ ಬಂದು… ನಿನಗೆ ಸಂಜೆ 20 ಸಾವಿರ ಕೊಟ್ಟಿದ್ದೆನಲ್ಲಾ ಕೊಡು ಎಂದು ತೆಗೆದುಕೊಂಡು ಹೋದನು.. ಇತ್ತ ಸಾವಿತ್ರಕ್ಕಾ ಸಂಬಂಧಿಕರನ್ನೆಲ್ಲಾ ಸೇರಿಸಿಕೊಂಡು ಹೂ ಕಟ್ಟುತ್ತಿದ್ದಳು..

ಅತ್ತ..ಬೆಳಗಾಗುತ್ತಲೆ.. ಜಾನಕಿ ನನ್ನ ಬಾಳಿನ ಜ್ಯೋತಿಯಾಗುತ್ತಾಳೆಂದು ಕನಸು ಕಾಣುತ್ತಾ ಮಲಗಿದ ರಾಮ್..

ನೋಡು ನೋಡುತ್ತಲೆ ಬೆಳಗಾಯಿತು.. ಅರೆಗಳಿಗೆಯಲ್ಲಿ ನಾಗರಾಜಣ್ಣ ವಧುವಿನ ಕೋಣೆಗೆ ಬಂದು ಸ್ನಾನ ಮಾಡಿಕೊಂಡು ಬಿಳಿ ಪಂಚೆ ಬಿಳಿ ಶರ್ಟು ಧರಿಸಿ ಹೊರಟೇ ಹೋದನು.. ಇತ್ತ ಸಾವಿತ್ರಕ್ಕನು 2 ನಿಮಿಷದಲ್ಲಿ ಸ್ನಾನ ಮುಗಿಸಿ.. ಅದು ಇದು ಕೆಲಸ ಕಾರ್ಯ ನೋಡುತ್ತಿದ್ದಳು.. ಮಗಳನ್ನು ಎಬ್ಬಿಸಿ ಸ್ನಾನಕ್ಕೆ ಕಳುಹಿಸಿದರು.. ಅಷ್ಟರಲ್ಲಿ ಗಂಡಿನ ಮನೆ ಕಡೆಯವರು ಬಂದು ವಧುವಿದ್ದ ರೂಮಿನ ಬಾಗಿಲು ತಟ್ಟಲು ಆರಂಭಿಸಿದರು.. ಸಾವಿತ್ರಕ್ಕ ಬಾಗಿಲು ತೆರೆದು ನೋಡಿದಳು..

ಯಾರೋ ಒಬ್ಬ ಹೆಂಗಸು.. ನಾವಿರುವ ರೂಮಿನಲ್ಲಿ ಬಿಸಿ ನೀರು ಬರುತ್ತಿಲ್ಲ.. ಎಂದು ಹೇಳಿದರು.. ಇನ್ನೊಬ್ಬರು ಬಂದು.. ನಾವು ಗಂಡಿನ ಕಡೆಯವರು.. ನಮಗೆ ಸೋಪು ಟೂತ್ ಪೇಸ್ಟು ಸಿಕ್ಕಿಲ್ಲ ಎಂದರು.. ಅಷ್ಟರಲ್ಲಿ ಒಳಗಿದ್ದ ಯಾವುದೋ ಕವರ್ ಹುಡುಕಿ ಟೂತ್ ಪೇಸ್ಟ್ ಮತ್ತು ಸೋಪನ್ನು ತಂದು ಕೊಟ್ಟಳು ಸಾವಿತ್ರಕ್ಕ.. ಇತ್ತ ಜಾನಕಿ ಕೂಡ ಬೇಗನೆ ಸ್ನಾನ ಮುಗಿಸಿ ಬಂದು ಆ ಹೆಂಗಸಿಗೆ ಹೇಳಿದಳು.. ನೀವು ಇದೇ ರೂಮಿನಲ್ಲಿ ಸ್ನಾನ ಮಾಡಿ.. ಬಿಸಿ ನೀರು ಬರುತ್ತಿದೆ ಎಂದಳು..

ಆನಂತರ ಗಂಡಿನ ಪಾದಪೂಜೆ ಮಾಡಬೇಕು ಎಂದು ನಾಗರಾಜಣ್ಣ ಮತ್ತು‌ ಸಾವಿತ್ರಕ್ಕನನ್ನು ಕರೆದರು..

ಸರಿ ಅದೆಲ್ಲೋ ಇದ್ದ ನಾಗರಾಜಣ್ಣ ಓಡೋಡಿ ಬಂದನು.. ಇತ್ತ ಸಾವಿತ್ರಕ್ಕ ಕೂಡ ವರನಿಗೆ ಕೊಡವೇಕಾದ ವಾಚು ಉಂಗುರ ಚೈನನ್ನು ಜೋಪಾನವಾಗಿ ಹಿಡಿದು ತಂದಳು…

ರಾಮ್ ಬಿಳಿ ಪಂಚೆ ಶರ್ಟು ಧರಿಸಿ ಮದು ಮಗನಾಗಿ ಕಂಗೊಳಿಸುತ್ತಿದ್ದ..

ಅವನನ್ನು ಚೇರ್ ಮೇಲೆ ಕೂರಲು ಹೇಳಿದರು ಪುರೋಹಿತರು.. ಆನಂತರ ಕಾಲು ತೊಳೆಯಲು ಬಂದ ನಾಗರಾಜಣ್ಣ ಹಾಗೂ ಸಾವಿತ್ರಕ್ಕನನ್ನು ದಯಮಾಡಿ ಬೇಡ ಮಾವ.. ನನಗೆ ಮುಜುಗರವಾಗುತ್ತದೆ ಎಂದ..

ಆದರೆ ಅತ್ತ.. ಏಯ್ ರಾಮ್ ಇದು ಶಾಸ್ತ್ರ ಸುಮ್ಮನೆ ತೊಳುಸ್ಕೊ ಎಂದರು.. ಇರಲಿ ಬಿಡಪ್ಪ ಶಾಸ್ತ್ರ ಅಲ್ಲವಾ ಎಂದು ನಾಗರಾಜಣ್ಣ ಹೇಳಿದ‌… ಒಲ್ಲದ ಮನಸ್ಸಿನಲ್ಲಿಯೂ ರಾಮ್ ಒಪ್ಪಿಗೆ ಕೊಟ್ಟ.. ನಾಗರಾಜಣ್ಣ ಕಾಲು ತೊಳೆಯುವಾಗ ನೀರಿನ ಜೊತೆಗೆ ಜಾನಕಿಯ ಅಪ್ಪ ಅಮ್ಮನ ಕಣ್ಣೀರು ಕೂಡ ರಾಮ್ ನ ಕಾಲಿನ ಮೇಲೆ ಬಿದ್ದದ್ದು.. ರಾಮ್ ಗೆ ಗೊತ್ತಾಯಿತು.. ಹೆಣ್ಣು ಹೆತ್ತವರ ಸಂಕಟ ತಿಳಿಯದಷ್ಟು ಕಲ್ಲು ಮನಸಿನವನಲ್ಲ ರಾಮ್..

ಹ.. ಮುಂದೆ ಎಲ್ಲಾ ಶಾಸ್ತ್ರಗಳು ಆದವು.. ರಾಮ್ ಪಕ್ಕ ಜಾನಕಿ ಬಂದು ನಿಂತಳು ಅನೇಕ ಶಾಸ್ತ್ರ ನಡೆದವು..

ಆನಂತರ ಪುರೋಹಿತರು.. ರಾಮ್ ಕೈಗೆ ತಾಳಿಯನ್ನು ತಂದು ಕೊಟ್ಟರು… ಇನ್ನೇನು ಜಾನಕಿಯ ಕೊರಳಿಗೆ ತಾಳಿ ಕಟ್ಟುವ ಸಮಯ.. ಆದರೆ ಅಲ್ಲಿ ನಾಗರಾಜಣ್ಣ ಇರಲಿಲ್ಲ.. ಜಾನಕಿ ಅಮ್ಮನ ಬಳಿ ಸನ್ನೆ ಮಾಡುತ್ತಲೇ ಇದ್ದಳು ಅಪ್ಪ ಎಲ್ಲಿ?? ಅಂತ.. ಅತ್ತ ಒಂದು ಕಡೆ ಮೂಲೆಯಲ್ಲಿ ಶೆಟ್ಟರ ಬಳಿ ನಾಗರಾಜಣ್ಣ ಏನನ್ನೋ ಮಾತನಾಡುತ್ತಿದ್ದ..

ಜಾನಕಿಯ ಚಡಪಡಿಕೆ ರಾಮನಿಗೆ ಅರ್ಥವಾಯಿತು.. ಪುರೋಹಿತರು ತಾಳಿ ಕಟ್ಟಲು ಹೇಳಿದರು.. ಆದರೆ ರಾಮ್ ದೂರದಲ್ಲಿ ಇದ್ದ ನಾಗರಾಜಣ್ಣನನ್ನು ನೋಡಿದ.. ಪಕ್ಕದಲ್ಲಿ ನಿಂತಿದ್ದ ಸ್ನೇಹಿತನೊಬ್ಬನಿಗೆ ಕಿವಿಯಲ್ಲಿ..‌ಹೋಗಿ ನಮ್ಮ ಮಾವನನ್ನು ಕರೆದುಕೊಂಡು ಬಾ ಎಂದ..

ಆ ಸ್ನೇಹಿತ ಹೋಗಿ ನಾಗರಾಜಣ್ಣ ನನ್ನು ಕರೆ ತಂದ.. ಜಾನಕಿಯ ಮುಖದಲ್ಲಿ ಸಂತೋಷ ಎದ್ದು ಕಂಡಿತು.. ಅದನ್ನು ನೋಡಿ ರಾಮನು ಖುಷಿ ಪಟ್ಟ…

ಮತ್ತೊಮ್ಮೆ ಪುರೋಹಿತರು ತಾಳಿ ಕಟ್ಟಲು ಹೇಳಿದರು.. ರಾಮ್ ಒಮ್ಮೆ ತನ್ನ ಅಪ್ಪ ಅಮ್ಮನನ್ನು ನೋಡಿದ.. ಇತ್ತ ಜಾನಕಿಯೂ ತನ್ನ ಅಪ್ಪ ಅಮ್ಮನನ್ನು ನೋಡಿದಳು.. ಎಲ್ಲರೂ ಅಕ್ಕಪಕ್ಕವೇ ಇದ್ದರು..

ಈಗ ರಾಮ್ ತನ್ನ ಕೈನಲ್ಲಿ ತಾಳಿಯನ್ನು ಹಿಡಿದು ಜಾನಕಿಗೆ ಬಹಳ ಹತ್ತಿರ ಬಂದ.. ಅವಳ ಬಿಸಿ ಉಸಿರು ರಾಮನ ಕತ್ತನ್ನು ಸ್ಪರ್ಶಿಸುತಿತ್ತು.. ಇನ್ನೂ ಹತ್ತಿರ ಮುಖವನ್ನು ತಂದು.. “ಇನ್ನು ಮುಂದೆ ಈ ದೇಹದ ಆತ್ಮ ನೀನು” ನಾನು ನಿನಗೆ ಒಪ್ಪಿಗೆ ನಾ?? ಅಂತ ಕೇಳ್ತಾನೆ ರಾಮ್..

ಅವನು ಹಾಗೆ ಕೇಳಲು ಸಂತೋಷಕ್ಕೆ ಕಣ್ಣಲ್ಲಿ ನೀರು ತುಂಬಿಕೊಳ್ಳತ್ತೆ ಜಾನಕಿಗೆ.. ತಲೆಯಾಡಿಸುತ್ತಲೇ ತನ್ನ ಒಪ್ಪಿಗೆ ಸೂಚಿಸುತ್ತಾಳೆ ಜಾನಕಿ..

ಗಟ್ಟಿ ಮೇಳ ಮೊಳಗುತ್ತದೇ..‌ಎಲ್ಲರೂ ಅಕ್ಷತೆಯ ಮಳೆಗರೆಯುತ್ತಾರೆ.. ಇತ್ತ ರಾಮ್ ತನ್ನ ಸಂಪೂರ್ಣ ಮನಸ್ಸಿನಿಂದ ಜಾನಕಿಗೆ ತಾಳಿಯನ್ನು ಕಟ್ಟುತ್ತಾನೆ.. ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಾರೆ..

ಜಾನಕಿಯ ಕಾಲಿನ ಹೆಬ್ಬೆರಳನ್ನು ಹಿಡಿದು ಸಪ್ತಪದಿ ತುಳಿಸುತ್ತಾನೆ ರಾಮ್.. ಇತ್ತ ರಾಮ್ ನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾಳೆ ಜಾನಕಿ..

ಆನಂತರ ಹೊರಗೆ ಬಂದು ಅರುಂಧತಿ ನಕ್ಷತ್ರ ತೋರಿಸುತ್ತಾನೆ ರಾಮ್.. ಪುರೋಹಿತರು ನಕ್ಷತ್ರ ಕಾಣ್ತೇನಮ್ಮ ಜಾನಕಿ.. ಎನ್ನಲು.. ಹೂ ಕಂಡಿತು ಎನ್ನುತ್ತಾಳೆ ಜಾನಕಿ..

ಕೈ ಹಿಡಿದು ಮದುವೆ ಮನೆಯ ಒಳಗೆ ಕರೆತರುತ್ತಾನೆ ರಾಮ್..

ಆನಂತರ ಎಲ್ಲರೂ ಊಟಕ್ಕೆ ಬನ್ನಿ ಎನ್ನಲು.. ಎಲ್ಲರೂ ಊಟಕ್ಕೆ ಹೋಗುತ್ತಾರೆ.. ಅಷ್ಟರಲ್ಲಾಗಲೇ ಬಂದ ನೆಂಟರೆಲ್ಲರ ಊಟವೂ ಆಗಿ.. ಕೊನೆ ಪಂಕ್ತಿಯಾಗಿರುತ್ತದೆ… ಪಲ್ಯವೆಲ್ಲಾ ಖಾಲಿಯಾಗಿ.. ಅನ್ನ ಸಾರು ಮಾತ್ರ ಉಳಿದಿರುತ್ತದೆ..

ವಧು ವರರ ಜೊತೆಗೆ ಮನೆಯವರೂ ಊಟಕ್ಕೆ ಕುಳಿತಿರುತ್ತಾರೆ.. ಅನ್ನ ಸಾಂಬಾರ್ ಹಾಗೂ ಒಂದು ಸ್ವೀಟನ್ನು ತಂದು ಬಡಿಸುತ್ತಾರೆ ಭಟ್ಟರು..

ಶುಭ ಸಮಾರಂಭಗಳಲ್ಲಿ ಕೊಂಕನ್ನು ಆಡಬೇಕು ಎಂದೇ ಕೆಲವರು ಹುಟ್ಟಿರುತ್ತಾರೆ.. ಅವರು ಇದೇನು ಹೀಗಿದೆ ಊಟ ಎನ್ನುತ್ತಾರೆ.. ಎದುರಲ್ಲಿ ಕೂತಿದ್ದ ನಾಗರಾಜಣ್ಣನಿಗೆ ಮುಜುಗರ ವಾಗುತ್ತದೆ.. ಅದನ್ನು ನೋಡಿದ ರಾಮ್.. ಯಾವುದೇ ಹಮ್ಮು ಬಿಮ್ಮಿಲ್ಲದೇ ಊಟ ಬಹಳ ಚೆನ್ನಾಗಿದೆ ಮಾವ ಎನ್ನುತ್ತಾನೆ.. ಅಷ್ಟರಲ್ಲಿ ಉಳಿದ ಕೊಂಕಿನ ಬಾಯಿಗಳೆಲ್ಲಾ ಮುಚ್ವಿಕೊಳ್ಳುತ್ತವೆ..

ಆನಂತರ ಮಗಳನ್ನು ರಾಮ್ ಜೊತೆ ಕಳುಹಿಸಿಕೊಡುವ ಸಮಯ..

23 ವರ್ಷ ಪ್ರೀತಿಯಿಂದ ಸಾಕಿದ್ದ ಮಗಳನ್ನು ಇಂದು ಗಂಡನ ಮನೆಗೆ ಕಳುಹಿಸಿಕೊಡುವ ಸಮಯ ಬಂದೇ ಬಿಟ್ಟಿತು ಎಂದು ನಾಗರಾಜಣ್ಣ ಕಣ್ಣೀರು ಹಾಕುತ್ತಾನೆ.. ನನ್ನ ಕಣ್ಣ ಮುಂದೆ ಕೆಂಪು ಬಣ್ಣದ ಫ್ರಾಕ್ ಒಂದನ್ನು ತೊಟ್ಟು ಇನ್ನೂ ಪುಟ್ಟ ಪುಟ್ಟ ಹೆಜ್ಜೆಯನಿಟ್ಟು ಅಪ್ಪಾ ಅಪ್ಪಾ ಎನ್ನುತ್ತಿದ್ದ ಜಾನಕಿಗೆ.. ಇಷ್ಟು ಬೇಗ ಮದುವೆ ಮಾಡಿಬಿಟ್ಟೆನಾ ಅಂದುಕೊಳ್ಳುತ್ತಾನೆ ನಾಗರಾಜಣ್ಣ.. ಇತ್ತ ಸಾವಿತ್ರಕ್ಕ ಮಗಳನ್ನು ತಬ್ಬಿಕೊಂಡು.. ಹೋದ ಮನೆಯಲ್ಲಿ ಅನುಸರಿಸಿಕೊಂಡು ಹೋಗು ಮಗಳೆ ಎಂದು ಅಳುತ್ತಾ ಬುದ್ದಿವಾದ ಹೇಳುತ್ತಿರುತ್ತಾಳೆ..

ಕೊನೆಗೂ ಆ ಸಮಯ ಬಂದೇ ಬಿಟ್ಟಿತು.. ಜಾನಕಿಯ ಕೈ ಯನ್ನು ರಾಮ್ ಕೈನಲ್ಲಿ ಇರಿಸಿ.. ಇನ್ನು ಮುಂದೆ ಇವಳು ನಿನ್ನ ಮನೆಯವಳಪ್ಪಾ.. ಚೆನ್ನಾಗಿ ನೋಡಿಕೋ ಎನ್ನುತ್ತಾನೆ ನಾಗರಾಜಣ್ಣ..

ನಾಗರಾಜಣ್ಣ ಹಾಗೂ ಸಾವಿತ್ರಕ್ಕ ಅಳು ನಿಲ್ಲದ್ದಾಗಿರುತ್ತದೆ.. ಅದನ್ನು ನೋಡಿದ ರಾಮ್.. ಅಳಬೇಡಿ ಮಾವ… ಜಾನಕಿ ಇನ್ನು ಮುಂದೆಯೂ ಚೆನ್ನಾಗಿರುತ್ತಾಳೆ ಎನ್ನುತ್ತಾನೆ..

ಅಳಿಯನ ಆ ಒಂದು ಮಾತು ಸಾಕಿತ್ತು.. ನಾಗರಾಜಣ್ಣ ಹಾಗೂ ಸಾವಿತ್ರಕ್ಕ ಖುಷಿ ಪಡಲು.. ಬಡಜೀವಗಳು ಸಂತೋಷ ಪಟ್ಟುಕೊಂಡವು..

ಅಳುತ್ತಿದ್ದ ಜಾನಕಿಯ ಕಣ್ಣನ್ನು ಸ್ವತಃ ರಾಮನೇ ಒರೆಸುತ್ತಾನೆ..‌ ಹಿಡಿದಿದ್ದ ಕೈ ಯನ್ನು ಗಟ್ಟಿಗೊಳಿಸುತ್ತಾನೆ..‌

ಜಾನಕಿಗೆ ಅದು ತಿಳಿಯುತ್ತದೆ.. ಅವನು ಹಿಡಿದಿದ್ದ ಜಾನಕಿಯ ಕೈ ಯನ್ನು ಇನ್ನಷ್ಟು ಬಿಗಿ ಗೊಳಿಸುತ್ತಾನೆ.. ಕಣ್ಣಿನಲ್ಲಿ‌ ನಾನಿದ್ದೇನೆ ಎನ್ನುವ ಮಾತು ಜಾನಕಿಗಾಗಿ ಹೊರಬರುತ್ತದೆ.. ಅರ್ಥ ಮಾಡಿಕೊಂಡ ಜಾನಕಿ ಸ್ವಲ್ಪ ಸಮಾಧಾನವಾಗುತ್ತಾಳೆ..

ಜಾನಕಿಯನ್ನು ಕರೆದುಕೊಂಡು ಕಾರ್ ಹತ್ತುತ್ತಾನೆ ರಾಮ್… ಎಲ್ಲರಿಗೂ ಹೋಗಿ ಬರುವೆವು ಎಂದು ಆಶೀರ್ವಾದ ಪಡೆದು ಹೊರಡುತ್ತಾರೆ.. ಜಾನಕಿಯ ಅಪ್ಪ ಅಮ್ಮ ಅಳುತ್ತಿರುವುದು ಕಾರಿನ ಕನ್ನಡಿಯಲ್ಲಿ ಕಾಣುತ್ತಿರುತ್ತದೆ.. ಕಾರ್ ಇನ್ನೇನು ಮದುವೆ ಮನೆಯ ಗೇಟಿನಿಂದ ಹೊರ ಬಂತು ಅಷ್ಟರಲ್ಲಿ ರಾಮ್ ನ ಮನಸ್ಸು ಕೇಳಲೇ ಇಲ್ಲ.. ಒಂದು ನಿಮಿಷ ಕಾರ್ ನಿಲ್ಲಿಸು ಎಂದು ಡ್ರೈವರ್ ಗೆ ಹೇಳುತ್ತಾನೆ..

ಕಾರ್ ನಿಂದ ಇಳಿದು ಸೀದಾ ಮಾವನ ಬಳಿ ಬಂದು.. ಇನ್ನು ಮುಂದೆ ನಾನು ನಿಮ್ಮ ಮಗ.. ಎಂದೂ ಯಾವತ್ತೂ ಚಿಂತಿಸದಿರಿ… ಎಂದು ಕೈ ಹಿಡಿದು ಸಮಾಧಾನ ಹೇಳಿ ಹೊರಡುತ್ತಾನೆ..

ನಾಗರಾಜಣ್ಣನ ಮನಸ್ಸು ತುಂಬಿ ಬಂತು… ಮಗಳಿಗೆ ಒಳ್ಳೆಯ ವರನನ್ನು ಹುಡುಕಿರುವೆ ಎಂಬ ಆತ್ಮ ತೃಪ್ತಿ ನೆಮ್ಮದಿ ನಾಗರಾಜಣ್ಣನ ಕಣ್ಣಲ್ಲಿ ಕಾಣುತಿತ್ತು…

ಇತ್ತ ಎಲ್ಲರೂ ಉಳಿದ ಸಾಮಾನನ್ನು ಬಸ್ಸಿಗೆ ತುಂಬಲು ಆರಂಭಿಸಿದರು..

ರಾತ್ರಿಯೇ ಶೆಟ್ಟರ ಬಳಿ ಇನ್ನೂ 80 ಸಾವಿರ ಹಣವನ್ನು ಸಾಲವಾಗಿ ಪಡೆದಿದ್ದ ನಾಗರಾಜಣ್ಣ.. ಇನ್ನು ಯಾರು ಯಾರಿಗೆ ಬಾಕಿ ಕೊಡಬೇಕೋ ಅವರಿಗೆ ಹಣ ಕೊಡಲು ಬಂದ..

ಭಟ್ಟರ ಬಳಿ ಬಂದು ಉಳಿದ 20 ಸಾವಿರ ಹಣ ಕೊಡಲು ಬಂದಾಗ.. ಇಲ್ಲಾ ನಾಗರಾಜಣ್ಣ… ರಾತ್ರಿಯೇ ನಿಮ್ಮ ಅಳಿಯ ಬಂದು 3 ಸಾವಿರ ಹೆಚ್ವಿಗೆಯಾಗಿಯೇ ಹಣ ನೀಡಿದರು.. ಎನ್ನುತ್ತಾರೆ ಭಟ್ಟರು..

ಒಂದು ಕ್ಷಣ ನಾಗರಾಜಣ್ಣನಿಗೆ ಆಶ್ಚರ್ಯವಾಗುತ್ತದೆ..‌ಅಯ್ಯೊ ಇದೇನಾಯ್ತು ಎನ್ನುತ್ತಾ… ಶಾಮಿಯಾನ ಬಿಚ್ಚುತ್ತಿದ್ದ ಜಾಗಕ್ಕೆ ಬಂದು.. ಅವರಿಗೆ ಹಣ ಕೊಡಲು ಮುಂದಾಗುತ್ತಾನೆ.. ಅವರೂ ಕೂಡ ಇದನ್ನೇ ಹೇಳುತ್ತಾರೆ..

ಇನ್ನೇಕೆ ಈ ಹಣ ಎಂದು ಶೆಟ್ಟರಿಗೆ ವಾಪಸ್ ನೀಡಲು ಬಂದಾಗ… ಶೆಟ್ಟರು.. ಇಲ್ಲಾ ನಾಗರಾಜಣ್ಣ.. ಈ ಹಣ ನನ್ನದಲ್ಲ.. ನಿನ್ನ ಅಳಿಯ ರಾತ್ರಿಯೇ ತಂದು ನನ್ಮ ಬಳಿ ಕೊಟ್ಟಿದ್ದರು… ಜೊತೆಗೆ ನೀನು ಮದುವೆಗಾಗಿ ಮಾಡಿದ್ದ 5 ಲಕ್ಷ ಸಾಲಕ್ಕೆ ರಾತ್ರಿಯೇ ಚೆಕ್ ನೀಡಿದ್ದಾರೆ ಎಂದರು..

ಒಂದು ಕ್ಷಣ ನಾಗರಾಜಣ್ಣನಿಗೆ ಏನು‌ಮಾಡಬೇಕೆಂದು ತೋಚುವುದಿಲ್ಲ.. ತಕ್ಷಣ ಜೇಬಿನಿಂದ ಫೋನ್ ತೆಗೆದು ರಾಮನಿಗೆ ಫೋನ್ ಮಾಡುತ್ತಾರೆ..

ಇತ್ತ ಕಾರಿನಲ್ಲಿ ಅತ್ತು ಅತ್ತು ಸುಸ್ತಾಗಿದ್ದ ಜಾನಕಿ ರಾಮನ ಭುಜಕ್ಕೆ ಒರಗಿ ಮಲಗಿರುತ್ತಾಳೆ.. ರಾಮನ ಫೋನ್ ರಿಂಗ್ ಆಗುತ್ತದೆ.. ಜಾನಕಿಗೆ ಎಚ್ಚರ ವಾಗಿಬಿಡುತ್ತದೆ ಎಂದು.. ಮೆಲ್ಲಗೆ ಜೇಬಿನಲ್ಲಿದ್ದ ಫೋನ್ ತೆಗೆದು ರಿಸೀವ್ ಮಾಡುತ್ತಾನೆ..

ಅತ್ತ ಯಾಕಪ್ಪಾ ರಾಮ್ ಹೀಗೆ ಮಾಡಿದೆ ಎಂದು ನಾಗರಾಜಣ್ಣ ಕೇಳುತ್ತಾನೆ…

ಆಗ ರಾಮ್ ಹೇಳುವುದು ಒಂದೇ ಮಾತು… “ನಾನು ಬಾಯಿ ಮಾತಿಗೆ ಮಾತ್ರ ನಿಮ್ಮ ಮಗನಾಗಿರುತ್ತೇನೆ ಎಂದು ಹೇಳಲಿಲ್ಲ ಮಾವ… ನನ್ನ ಕರ್ತವ್ಯ ನಾನು ಮಾಡಿದ್ದೇನೆ… ನನ್ನ ದೇಹಕ್ಕೆ ಆತ್ಮವಾಗುವ ಜೀವನದುದ್ದಕ್ಕೂ ಜೊತೆಯಾಗಿ ಬಾಳುವ.. ಜಾನಕಿಯನ್ನು ಕೊಟ್ಟಿದ್ದೀರಾ ನೀವು… ನಿಮಗೆ ನಾನು ಏನು ಮಾಡಿದರೂ ಕಡಿಮೆಯೇ ಎನ್ನುತ್ತಾನೆ.. ಇದನ್ನು ಯಾರ ಬಳಿಯೂ ಹೇಳಬೇಡಿ… ಇಲ್ಲಿಗೆ ಸುಮ್ಮನೆ ಬಿಟ್ಟುಬಿಡಿ” ಎಂದು ಹೆಚ್ಚಿಗೆ ಮಾತನಾಡದೆ ಫೋನ್ ಕಟ್ ಮಾಡುತ್ತಾನೆ ರಾಮ್…

ಇತ್ತ ಭುಜಕ್ಕೆ ಒರಗಿ ಮಲಗಿದ್ದ ಜಾನಕಿಯ ಕಿವಿಗೆ ಅಷ್ಟೂ ಮಾತುಗಳು ಬೀಳುತ್ತವೆ.. ಮನಸ್ಸಿನಲ್ಲಿಯೇ ಒಬ್ಬ ಪರಿಪೂರ್ಣ ಮನಸ್ಸಿನ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದುಕೊಳ್ಳೂತ್ತಾಳೆ ಜಾನಕಿ…

ಕೊನೆಯಲ್ಲಿ ನನ್ನದೊಂದು ಮಾತು…

ಮದುವೆ ಮನೆಯ ಊಟದಲ್ಲಿ ಉಪ್ಪು ಹೆಚ್ಚಾಗಿದ್ದಲ್ಲಿ‌ ದಯಮಾಡಿ ಅದನ್ನು ಹೇಳಬೇಡಿ.. ಆ ಹೆಣ್ಣಿನ ಅಪ್ಪ ಅಮ್ಮನ ಕಣ್ಣೀರು ಆ ಊಟದಲ್ಲಿ ಸೇರಿ ಹೋಗಿ ಉಪ್ಪು ಹೆಚ್ಚಾಗಿರುತ್ತದೆಯೇ ಹೊರತು… ಬೇರೆ ಯಾವ ಕಾರಣದಿಂದಲೂ ಅಲ್ಲ..

ಇಷ್ಟವಾಗಿದ್ದರೆ ಶೇರ್ ಮಾಡಿ..

We hope you enjoyed reading above stories. Read More ಕನ್ನಡ ನೀತಿ ಕಥೆಗಳು here.