Read this below Small Kannada Story, ಯಾರನ್ನೂ ಸಣ್ಣವರೆಂದು ಗೇಲಿ ಮಾಡ್ಬೇಡಿ.
ಪರರನ್ನು ಸಣ್ಣವರೆಂದು
ಬಿಂಬಿಸಿ,
ನಾವು ದೊಡ್ಡವರಾಗಲು
ಸಾಧ್ಯವಿಲ್ಲ..!!
1. Small Kannada Story – ಇಲಿ ಮತ್ತು ಸಿಂಹ
ಸಿಂಹವು ಒಮ್ಮೆ ಕಾಡಿನಲ್ಲಿ ಮಲಗಿದ್ದಾಗ ಇಲಿಯೊಂದು ಮೋಜಿಗಾಗಿ ಅದರ ದೇಹದ ಮೇಲೆ ಮತ್ತು ಕೆಳಗೆ ಓಡಲು ಪ್ರಾರಂಭಿಸಿತು. ಇದು ಸಿಂಹದ ನಿದ್ರೆಗೆ ಭಂಗ ತಂದಿತು ಮತ್ತು ಸಿಂಹವು ಸಾಕಷ್ಟು ಕೋಪದಿಂದ ಎಚ್ಚರಗೊಂಡಿತು. ಸಿಂಹವು ಇಲಿಯನ್ನು ತಿನ್ನಲು ಹೊರಟಿದ್ದಾಗ ಇಲಿಯು ಸಿಂಹವನ್ನು ನನ್ನನ್ನು ತಿನ್ನಬೇಡ ಬಿಟ್ಟುಬಿಡು ಎಂದು ವಿನಂತಿಸಿತು ಮತ್ತು “ನಾನು ನಿನಗೆ ಭರವಸೆ ನೀಡುತ್ತೇನೆ, ನೀನು ನನ್ನನ್ನು ತಿನ್ನದೇ ಬಿಟ್ಟರೆ, ಒಂದು ದಿನ ನಾನು ನಿಮಗೆ ಸಹಾಯ ಮಾಡುತ್ತೇನೆ.” ಆಗ ಸಿಂಹವು ಇಲಿಯ ವಿಶ್ವಾಸಕ್ಕೆ ನಕ್ಕಿತು ಮತ್ತು ಇಲಿಯನ್ನು ಹೋಗಲು ಬಿಟ್ಟಿತು.
ಒಂದು ದಿನ ಸಿಂಹ ಕಾಡಿನ ಬೇಟೆಗಾರರು ಹಾಕಿದ ಬಲೆಗೆ ಬಿದ್ದಿತ್ತು. ಸಿಂಹವು ಹೊರಬರಲು ಹರಸಾಹಸ ಮಾಡಿತು ಆದರೆ ಆಗಲಿಲ್ಲ, ಮತ್ತು ಕಿರುಚಲು ಪ್ರಾರಂಭಿಸಿತು. ಆಗ ಅಲ್ಲೇ ಇದ್ದ ಇಲಿಗೆ ಸಿಂಹದ ಕಿರುಚಾಟ ಕೇಳಿಸಿತು ಮತ್ತು ಇಲಿಯು ಸಿಂಹವು ತೊಂದರೆಯಲ್ಲಿದೆಯೆಂದು ಗಮನಿಸಿತು. ಇಲಿಯು ತಕ್ಷಣ ಸಿಂಹದ ಹತ್ತಿರ ಬಂದಿತು. ಆಗ ಇಲಿಯೂ ಸಿಂಹಗೆ ಹೇಳಿದ್ದು ಹೆದರಬೇಡ ನಾನು ನಿನ್ನನ್ನು ಬಿಡಿಸುತ್ತೇನೆ ಎಂದು. ನಂತರ ಇಲಿಯು ಬೇಗಬೇಗನೆ ಹಗ್ಗವನ್ನು ಕಡಿಯಲು ಪ್ರಾರಂಭಿಸಿತು ಮತ್ತು ಸಿಂಹವನ್ನು ಬಲೆಯಿಂದ ಬಿಡುಗಡೆ ಮಾಡಿತು.
ನಂತರ ಇಲಿ ಮತ್ತು ಸಿಂಹ ಬೇಟೆಗಾರರು ಬರುವ ಮೊದಲೇ ಅಲ್ಲಿಂದ ಓಡಿಹೋದರು.
ಕಥೆಯ ನೀತಿ:
“ಯಾರನ್ನೂ ನಮಗಿಂತ ಸಣ್ಣವರಿಂದ ಬಿಂಬಿಸಬಾರದು, ಅವರವರ ಶಕ್ತಿ ಅವರಿಗಿರುತ್ತದೆ.!”
2. ಆನೆಗಳು ಹಾಗೂ ಇಲಿಗಳ ಗುಂಪಿನ ಕಥೆ
ಒಂದು ಊರು, ಆ ಊರಿನಲ್ಲಿ ದೊಡ್ಡ ಕಾಡಿತ್ತು. ಆ ಕಾಡಿನ ಹೊರಭಾಗದಲ್ಲಿ ಒಂದು ಪುಟ್ಟ ಕೆರೆ. ಕಾಡಿನಲ್ಲಿ ಪ್ರಾಣಿಗಳು ಸಮೃದ್ದವಾಗಿ ಜೀವನ ನಡೆಸುತ್ತಿದ್ದವು. ಆ ಊರಿನ ಹೊರವಲಯದಲ್ಲಿ ಇಲಿಗಳ ಗುಂಪೊಂದು ವಾಸ ಮಾಡುತ್ತಿದ್ದವು. ಇದೆ ಊರಿನಲ್ಲಿ ಕೆಲ ಆನೆಗಳ ಹಿಂಡು ಸಹ ಇದ್ದವು. ಈ ಆನೆಗಳು ಅಲ್ಲಿನ ಕೆರೆಯಲ್ಲಿ ಪ್ರತಿದಿನ ನೀರು ಕುಡಿಯಲು ಬರುತ್ತಿದ್ದವು. ಆ ಕೆರೆಯ ಪಕ್ಕದಲ್ಲಿಯೇ ಇಲಿಗಳು ವಾಸ ಮಾಡುತ್ತಿದ್ದವು. ಇಲಿಗಳು ವಾಸಿಸುವ ಸ್ಥಳ ಈ ಕೆರೆಗೆ ಹೋಗುವ ದಾರಿಯಲ್ಲಿ ಇದ್ದ ಕಾರಣ ಆನೆಗಳು ಕೆರೆಗೆ ಹೋಗುವಾಗ ತಮಗೆ ಅರಿವಿಲ್ಲದಂತೆ ಪ್ರತಿದಿನ ಪಾಪ ಒಂದು ಅಥವಾ ಎರಡು ಇಲಿಗಳನ್ನು ತುಳಿದು ಹೋಗುತ್ತಿದ್ದವು. ಇದರಿಂದ ಇಲಿಗಳ ಸಾವು ಹೆಚ್ಚಾಗುತ್ತಿದ್ದವು.
ಪ್ರತಿದಿನ ಇದೇ ರೀತಿ ನಡೆಯುತ್ತಿದ್ದರಿಂದ, ಇಲಿಗಳಿಗೆ ಸಂಕಷ್ಟ ಶುರುವಾಯಿತು. ಪ್ರತಿದಿನ ಇಲಿಗಳ ಸಾವನ್ನ ನೋಡುವುದು ಹೇಗೆ, ಅದನ್ನು ಕಡಿಮೆ ಮಾಡುವುದು ಹೇಗೆ ಎಂದು ಇಲಿಗಳು ಸಭೆ ಸೇರಿ ಚರ್ಚೆ ನಡೆಸಿದವು. ಕೊನೆಗೆ ಇಲಿಗಳ ರಾಜ, ಆನೆಗಳ ರಾಜನನ್ನ ಭೇಟಿ ಮಾಡಿ, ಈ ವಿಚಾರವನ್ನು ತಿಳಿಸಿ, ಮನವಿ ಮಾಡಲು ನಿರ್ಧರಿಸಿತು.
ಹಾಗೆಯೇ, ಇಲಿಗಳ ರಾಜ ಆನೆಗಳ ರಾಜ ಹಾಗೂ ಇತರ ಆನೆಗಳನ್ನು ಭೇಟಿ ಮಾಡಿ , ಆನೆಗಳೇ, ನೀವು ಪ್ರತಿದಿನ ಕೆರೆಗೆ ಹೋಗುವಾಗ ನಿಮಗೆ ತಿಳಿಯದೇ, ಅನೇಕ ಇಲಿಗಳು ನಿಮ್ಮ ಕಾಲಿನ ಅಡಿಯಲ್ಲಿ ಸಿಕ್ಕು ಪ್ರಾಣ ಬಿಡುತ್ತಿವೆ. ಇದು ನಮಗೆ ಚಿಂತೆಯ ವಿಚಾರವಾಗಿದೆ. ಹಾಗಾಗಿ ದಯವಿಟ್ಟು ನೀವು ನಿಮ್ಮ ಕೆರೆಗೆ ಹೋಗುವ ದಾರಿಯನ್ನು ಬದಲಾಯಿಸಿದರೆ ನಮಗೆ ಸಹಾಯವಾಗುತ್ತದೆ. ನಿಮಗೆ ಜೀವನಪೂರ್ತಿ ಕೃತಜ್ಞರಾಗಿರುತ್ತೇವೆ ಎಂದು ಹೇಳುತ್ತದೆ.
ಇಲ್ಲಿ ಯಾರೂ ಸಣ್ಣವರಲ್ಲ
ಅಲ್ಲದೇ, ನಿಮಗೆ ಕಷ್ಟ ಬಂದಾಗ ಅಥವಾ ಅವಶ್ಯಕತೆ ಇದ್ದಾಗ ಸಹ ನಾವು ಸಹಾಯಕ್ಕೆ ಬರುತ್ತೇವೆ ಎಂದು ಮನವಿ ಮಾಡಿಕೊಳ್ಳುತ್ತದೆ. ಆದರೆ, ಈ ಆನೆಗಳ ರಾಜ, ನಾವು ಆನೆಗಳು, ನೀವು ನಮಗೆ ಹೇಗೆ ಸಹಾಯ ಮಾಡಬಹುದು ಎಂದು ಗೇಲಿ ಮಾಡುತ್ತದೆ. ಆದರೆ ಇಲಿಗಳ ರಾಜನಿಗೆ ನಾವು ಬೇರೆ ದಾರಿಯನ್ನು ಬಳಸುತ್ತೇವೆ, ನಿಮಗೆ ತೊಂದರೆ ಆಗುವುದಿಲ್ಲ ಎಂದು ಪ್ರಾಮಿಸ್ ಮಾಡುತ್ತದೆ.
ಹೀಗೆ ದಿನಗಳ ಕಳೆಯುತ್ತದೆ. ಒಂದು ದಿನ, ಆನೆಗಳು ನೀರು ಕುಡಿಯಲು ಬಂದಾಗ, ಕೆಲ ಬೇಟೆಗಾರರು ಹಾಕಿದ್ದ ಬಲೆಗಳಲ್ಲಿ ಸಿಕ್ಕಿಕೊಳ್ಳುತ್ತವೆ. ಅದೆಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಆಗುವುದಿಲ್ಲ. ಸೋತು ಸುಮ್ಮನೆ ಕುಳಿತಿರುತ್ತದೆ. ಇದನ್ನು ನೋಡಿದ ಇಲಿಗಳು, ಆನೆಗಳ ಸುತ್ತ ಇದ್ದ ಬಲೆಯನ್ನು ಕಡಿದು, ಆನೆಗಳನ್ನು ಬಿಡಿಸುತ್ತವೆ. ಈ ರೀತಿ ಜೀವ ಉಳಿಸಿದ ಇಲಿಗಳಿಗೆ ಆನೆಗಳು ಧನ್ಯವಾದ ಹೇಳುತ್ತವೆ.
ನೋಡಿ ಆನೆಯ ರಾಜ, ಇಲಿಗಳು ಸಣ್ಣ ಪ್ರಾಣಿ ಎಂದು ಗೇಲಿ ಮಾಡಿದ್ದ, ಆದರೆ ಇಲಿಗಳು ಆನೆಗಳ ಜೀವ ಉಳಿಸಿ ತಮ್ಮ ಶಕ್ತಿ ತೋರಿಸಿವೆ. ಹಾಗಾಗಿ ಯಾರೂ ಎಂದಿಗೂ ಸಣ್ಣವರಲ್ಲ ಎಂಬುದನ್ನ ಮರೆಯಬಾರದು.